ಉತ್ತರ ಪ್ರದೇಶ | ಕೈದಿಗಳಿಗೂ ಕ್ರಿಕೆಟ್ ಲೀಗ್!
►ಐಪಿಎಲ್ ಮಾದರಿಯ ಕ್ರಿಕೆಟ್ ಲೀಗ್ ಆಯೋಜಿಸಿದ ಮಥುರಾ ಕಾರಾಗೃಹ ►ಕೈದಿಗಳಲ್ಲಿ ಆತ್ಮವಿಶ್ವಾಸ ತುಂಬುವ ಸಹೃದಯ ನಡೆ

PC : ANI
ಮಥುರಾ: ವಿವಿಧ ಅಪರಾಧಗಳಡಿ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಿಗಳಿಗೆ ಕಾರಾಗೃಹಗಳಲ್ಲಿ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ವೃತ್ತಿ ತರಬೇತಿ ನೀಡಿ, ಅವರನ್ನು ಸ್ವಾವಲಂಬಿಗಳಾಗಿಸುವ ಯೋಜನೆ ಕಾರಾಗೃಹಗಳಲ್ಲಿ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಬಡಗಿ, ಕಮ್ಮಾರ, ಗಾರೆ, ಕಸೂತಿ – ಹೀಗೆ ಪುರುಷ ಮತ್ತು ಮಹಿಳಾ ಕೈದಿಗಳಿಬ್ಬರಿಗೂ ಅವರವರ ಆಸಕ್ತಿಯ ಕ್ಷೇತ್ರಗಳಲ್ಲಿ ತರಬೇತಿ ನೀಡಿ, ಬಿಡುಗಡೆಯಾಗುವ ವೇಳೆಗೆ ಅವರನ್ನು ವೃತ್ತಿಪರರನ್ನಾಗಿಸುವ, ತಮ್ಮ ಕಾರಾಗೃಹ ಶಿಕ್ಷೆಯ ಅವಧಿಯಲ್ಲಿ ಗಳಿಸಿದ ಪ್ರೋತ್ಸಾಹ ಧನದಿಂದ ಹೊರಗಿನ ಪ್ರಪಂಚದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ನಮ್ಮ ದೇಶದಲ್ಲಿ ಕಾನೂನುಬದ್ಧವಾಗಿಯೇ ನೀಡಲಾಗಿದೆ.
ಆದರೆ, ಮಥುರಾ ಕಾರಾಗೃಹ ಇನ್ನೂ ಒಂದು ಹೆಜ್ಜೆ ಹೋಗಿ, ತನ್ನಲ್ಲಿರುವ ಕೈದಿಗಳ ಕ್ರೀಡಾ ಪ್ರತಿಭೆಯನ್ನು ಜಗತ್ತಿನೆದುರು ಅನಾವರಣ ಮಾಡಲು ಕಾರಾಗೃಹದೊಳಗೇ ಐಪಿಎಲ್ ಮಾದರಿಯ ಕ್ರೀಡಾಕೂಟವನ್ನು ಆಯೋಜಿಸುವ ಮೂಲಕ ಹೊರ ಜಗತ್ತಿನ ಗಮನ ಸೆಳೆದಿದೆ. ಕಾರಾಗೃಹದ ಗೋಡೆಯೊಳಗೇ ಆಯೋಜನೆಗೊಂಡಿದ್ದ ಈ ಕ್ರೀಡಾಕೂಟವು ಹಲವು ಕೈದಿಗಳ ಸುಪ್ತ ಕ್ರೀಡಾ ಪ್ರತಿಭೆಯನ್ನು ಜಗತ್ತಿನೆದುರು ಪ್ರದರ್ಶಿಸಿದೆ. ಆ ಮೂಲಕ ಕೈದಿಗಳಲ್ಲಿ ಆತ್ಮವಿಶ್ವಾಸ ತುಂಬುವ ಸಹೃದಯ ನಡೆ ತೋರಿದೆ.
ಈ ಕುರಿತು ಎಕ್ಸ್ ನಲ್ಲಿ ಕೈದಿಗಳು ಕ್ರಿಕೆಟ್ ಆಡುತ್ತಿರುವ ವೀಡಿಯೊವೊಂದನ್ನು ಹಂಚಿಕೊಂಡು ಪೋಸ್ಟ್ ಮಾಡಿರುವ ANI ಸುದ್ದಿ ಸಂಸ್ಥೆ, “ಕೈದಿಗಳ ಪ್ರತಿಭೆಯನ್ನು ಉತ್ಕೃಷ್ಟಗೊಳಿಸಲು ಹಾಗೂ ಅವರ ದೈಹಿಕ ಆರೋಗ್ಯವನ್ನು ಸುಧಾರಿಸಿ, ಅವರನ್ನು ಮಾನಸಿಕ ಒತ್ತಡದಿಂದ ಮುಕ್ತಗೊಳಿಸುವ ಪ್ರಯತ್ನದ ಭಾಗವಾಗಿ ಮಥುರಾ ಜೈಲಿನಲ್ಲಿ ಐಪಿಎಲ್ ಮಾದರಿಯ ಜೈಲ್ ಪ್ರೀಮಿಯರ್ ಲೀಗ್ ಅನ್ನು ಆಯೋಜಿಸಲಾಗಿತ್ತು”, ಎಂದು ಹೇಳಿದೆ.
#WATCH | Uttar Pradesh | To enhance the talent of the prisoners, improve their physical health and relieve them from mental stress, Jail Premier League was organized on the lines of IPL among the prisoners in Mathura Jail pic.twitter.com/ACofTYmRgi
— ANI (@ANI) May 15, 2025
ಈ ವೀಡಿಯೊದಲ್ಲಿ ಬಲೂನುಗಳಿಂದ ಶೃಂಗಾರಗೊಂಡಿರುವ ಜೈಲು ಕಾಂಪೌಂಡಿನ ಒಳಗೆ ಕೈದಿಗಳು ಕ್ರಿಕೆಟ್ ಆಡುತ್ತಿರುವ ದೃಶ್ಯ ಸೆರೆಯಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿಗಳು ವಿಜೇತ ತಂಡಕ್ಕೆ ಪ್ರಶಸ್ತಿಗಳನ್ನು ವಿತರಿಸುತ್ತಿರುವುದು ಹಾಗೂ ತಾವು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರಿಂದ ತಮಗೇನನ್ನಿಸುತ್ತಿದೆ ಎಂಬ ಅಭಿಪ್ರಾಯವನ್ನು ಕೆಲವು ಕೈದಿಗಳು ಹಂಚಿಕೊಳ್ಳುತ್ತಿರುವುದೂ ಸೆರೆಯಾಗಿದೆ.
ಈ ಕ್ರೀಡಾಕೂಟದಲ್ಲಿ ಮಥುರಾ ಕಾರಾಗೃಹದಲ್ಲಿರುವ ಕೌಶುಲ್ ಎಂಬ ಕೈದಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಮತ್ತೊಬ್ಬ ಕೈದಿಯಾದ ಪಂಕಜ್ ಪರ್ಪಲ್ ಕ್ಯಾಪ್ ಪುರಸ್ಕಾರಕ್ಕೆ ಭಾಜನವಾದರೆ, ಭುರಾ ಎಂಬ ಕೈದಿಯು ಆರೆಂಜ್ ಕ್ಯಾಪ್ ಪುರಸ್ಕಾರವನ್ನು ಸ್ವೀಕರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಮಥುರಾ ಕಾರಾಗೃಹದ ಜೈಲು ಅಧೀಕ್ಷಕ ಅನ್ಷುಮನ್ ಗರ್ಗ್, “ಕೈದಿಯ ಜೀವನದಲ್ಲಿ ಕೆಲವು ಕ್ಷಣಗಳು ಸ್ವಾತಂತ್ರ್ಯದ ಅನುಭವ ನೀಡುತ್ತವೆ ಎಂಬುದನ್ನು ತಿಳಿಸುವುದು ಈ ಕ್ರೀಡಾಕೂಟದ ಹಿಂದಿನ ಉದ್ದೇಶವಾಗಿತ್ತು. ಇದು ಕೇವಲ ಫೈನಲ್ ಪಂದ್ಯವಲ್ಲ, ಇದು ಭರವಸೆ, ವಿಶ್ವಾಸದ ಸ್ಪರ್ಧಾತ್ಮಕ ಗೆಲುವು. ಮೈದಾನ ಒಂದೇ ಆಗಿದ್ದರೂ, ಆಟಗಾರರು ಬದಲಾಗಿದ್ದಾರೆ. ಇಂದಿನ ಪ್ರತಿಯೊಂದು ರನ್, ಕ್ಯಾಚ್, ಗೆಲುವುಗಳೆಲ್ಲವೂ, ಕೈದಿಗಳು ತಮ್ಮನ್ನು ತಾವು ಏನೆಂದು ಮತ್ತೊಮ್ಮೆ ಸಾಬೀತು ಮಾಡಿಕೊಳ್ಳುವ ಪ್ರಯತ್ನವಾಗಿತ್ತು” ಎಂದು ಶ್ಲಾಘಿಸಿದ್ದಾರೆ.







