Venezuela ಮೇಲೆ America ದಾಳಿ| ಗಂಭೀರ ಕಳವಳ ವ್ಯಕ್ತಪಡಿಸಿದ ಭಾರತ

ಎಸ್.ಜೈಶಂಕರ್ | Photo Credit : PTI
ಹೊಸದಿಲ್ಲಿ: ವೆನೆಝುವೆಲಾದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳ ಬಗ್ಗೆ ಭಾರತ ಗಂಭೀರ ಕಳವಳ ವ್ಯಕ್ತಪಡಿಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಅಲ್ಲಿನ ಜನರ ಹಿತಾಸಕ್ತಿ, ಯೋಗಕ್ಷೇಮ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಪಟ್ಟವರೆಲ್ಲರೂ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಲಕ್ಸೆಂಬರ್ಗ್ಗೆ ಅಧಿಕೃತ ಭೇಟಿ ನೀಡಿರುವ ಸಂದರ್ಭ ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜೈಶಂಕರ್, ಭಾರತವು ಹಲವು ವರ್ಷಗಳಿಂದ ವೆನೆಝುವೆಲಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಹೇಳಿದರು. ಅಮೆರಿಕ ನಡೆಸಿದ ವಾಯುದಾಳಿಗಳ ಬಳಿಕ, ವೆನೆಝುವೆಲಾದ ಆಗಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿಯನ್ನು ಕಳೆದ ವಾರಾಂತ್ಯದಲ್ಲಿ ಕಾರ್ಯಾಚರಣೆಯಲ್ಲಿ ಬಂಧಿಸಿರುವ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸಿದರು.
“ನಾವು ಸೋಮವಾರ ಒಂದು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ವೆನೆಝುವೆಲಾದಲ್ಲಿನ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ. ಆದರೆ, ವೆನೆಝುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಈ ಬಿಕ್ಕಟ್ಟಿನ ಹಿಂದಿರುವ ಎಲ್ಲರೂ ಒಟ್ಟಿಗೆ ಈಗ ಕುಳಿತು ಮಾತುಕತೆಯ ಮೂಲಕ ಒಂದು ನಿಲುವಿಗೆ ಬರಬೇಕು ಎಂಬುದು ನಮ್ಮ ಗಂಭೀರ ಆಗ್ರಹ. ಅಂತಿಮವಾಗಿ ಅದೇ ನಮ್ಮ ಪ್ರಮುಖ ಕಾಳಜಿ” ಎಂದು ಜೈಶಂಕರ್ ಹೇಳಿದರು.
“ಹಲವು ವರ್ಷಗಳಿಂದ ಉತ್ತಮ ಸಂಬಂಧ ಹೊಂದಿರುವ ದೇಶವಾಗಿ ವೆನೆಝುವೆಲಾ ಮುಂದುವರಿಯಬೇಕು ಎಂಬುದು ನಮ್ಮ ಆಶಯ. ಘಟನೆಗಳು ಏನೇ ಇರಲಿ, ಅಂತಿಮವಾಗಿ ಅಲ್ಲಿನ ಜನರು ಶಾಂತಿಯಿಂದ ಇರಬೇಕು ಎಂಬುದೇ ನಮ್ಮ ಬಯಕೆ,” ಎಂದು ಅವರು ಹೇಳಿದರು.
ಇದೇ ವೇಳೆ, ಸೋಮವಾರ ನೀಡಿದ ಹೇಳಿಕೆಯಲ್ಲಿ ವಿದೇಶಾಂಗ ಸಚಿವಾಲಯ, ವೆನೆಝುವೆಲಾದಲ್ಲಿನ ಇತ್ತೀಚಿನ ಬೆಳವಣಿಗೆ ತೀವೂ ಕಳವಳದ ವಿಷಯವಾಗಿವೆ ಎಂದು ತಿಳಿಸಿದೆ. ಅಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯನ್ನು ಭಾರತ ಸರಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದೂ ಹೇಳಿದೆ.
“ವೆನೆಝುವೆಲಾದ ಜನರ ಯೋಗಕ್ಷೇಮ ಮತ್ತು ಸುರಕ್ಷತೆಗೆ ಭಾರತ ತನ್ನ ಬೆಂಬಲವನ್ನು ಪುನರುಚ್ಚರಿಸುತ್ತದೆ. ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡಲು, ಮಾತುಕತೆಯ ಮೂಲಕ ಶಾಂತಿಯುತವಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಬಂಧಪಟ್ಟ ಎಲ್ಲರಿಗೂ ನಾವು ಕರೆ ನೀಡುತ್ತೇವೆ. ಕ್ಯಾರಕಾಸ್ ನಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂಪರ್ಕದಲ್ಲಿದ್ದು, ಸಾಧ್ಯವಿರುವ ಎಲ್ಲ ನೆರವನ್ನು ಮುಂದುವರಿಸುತ್ತದೆ,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವೆನೆಝುವೆಲಾಗೆ ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಎಲ್ಲಾ ಭಾರತೀಯ ಪ್ರಜೆಗಳಿಗೆ ಸರಕಾರ ಸಲಹೆ ನೀಡಿದೆ. ಅಲ್ಲದೆ, ವೆನೆಝುವೆಲಾದಲ್ಲಿ ಇರುವ ಭಾರತೀಯ ನಾಗರಿಕರು ತೀವ್ರ ಎಚ್ಚರಿಕೆ ವಹಿಸಬೇಕು ಮತ್ತು ದೇಶದೊಳಗಿನ ಸಂಚಾರವನ್ನು ಮಿತಿಗೊಳಿಸಬೇಕು ಎಂದು ಸೂಚಿಸಲಾಗಿದೆ







