ತಾಲಿಬಾನ್ ವಿದೇಶಾಂಗ ಸಚಿವರೊಂದಿಗೆ ಸಚಿವ ಜೈಶಂಕರ್ ಮಾತುಕತೆ
ಪಾಕಿಸ್ತಾನದ ವದಂತಿಗಳಿಗೆ ಕಿವಿಗೊಡದಿದ್ದಕ್ಕೆ ಶ್ಲಾಘನೆ

ವಿದೇಶಾಂಗ ಸಚಿವ ಎಸ್. ಜೈಶಂಕರ್ (PTI)
ಹೊಸದಿಲ್ಲಿ: ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಆಮಿರ್ ಖಾನ್ ಮುತ್ತಕಿ ಅವರೊಂದಿಗೆ ಗುರುವಾರ ಇದೇ ಮೊದಲ ಬಾರಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು, ಅಫ್ಘಾನ್ ಜನರೊಂದಿಗೆ ಭಾರತದ ಸಾಂಪ್ರದಾಯಿಕ ಸ್ನೇಹ ಮತ್ತು ಅದರ ಅಭಿವೃದ್ಧಿ ಬೆಂಬಲಗಳಿಗೆ ನಿರಂತರ ಬೆಂಬಲಕ್ಕೆ ಒತ್ತು ನೀಡಿದ್ದಾರೆ. ಉಭಯ ದೇಶಗಳ ನಡುವಿನ ಸಹಕಾರವನ್ನು ಬಲಗೊಳಿಸಲು ಮಾರ್ಗೋಪಾಯಗಳ ಕುರಿತೂ ಉಭಯ ನಾಯಕರು ಚರ್ಚಿಸಿದ್ದಾರೆ.
ಎ.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಈಗಾಗಲೇ ಖಂಡಿಸಿದೆ. ಈ ಮಧ್ಯೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವೆಯೂ ಉದ್ವಿಗ್ನತೆ ಹೆಚ್ಚುತ್ತಲೇ ಇದೆ.
ಆಗಸ್ಟ್ 2021ರಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದು ಉಭಯ ದೇಶಗಳ ನಡುವಿನ ಮೊದಲ ರಾಜಕೀಯ ಸಂಪರ್ಕ ಮತ್ತು ಮಾತುಕತೆಯಾಗಿದೆ. ಈ ವರ್ಷದ ಜನವರಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಯವರು ದುಬೈನಲ್ಲಿ ಮುತ್ತಕಿಯವರನ್ನು ಭೇಟಿಯಾಗಿದ್ದರು.
ಡಿಸೆಂಬರ್ 1999ರಲ್ಲಿ ಕಂದಹಾರ್ ವಿಮಾನ ಅಪಹರಣದ ಸಂದರ್ಭ ಆಗಿನ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಅವರು ತಾಲಿಬಾನ್ ವಿದೇಶಾಂಗ ಸಚಿವ ವಕೀಲ್ ಅಹ್ಮದ್ ಮುತ್ತವಕೀಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಇದು ಉಭಯ ದೇಶಗಳ ನಡುವಿನ ಕೊನೆಯ ರಾಜಕೀಯ ಸಂಪರ್ಕವಾಗಿತ್ತು.
ಮುತ್ತಕಿ ಅವರೊಂದಿಗೆ ಮಾತುಕತೆಗಳ ಬಳಿಕ ಜೈಶಂಕರ್ ಅವರು ಎಕ್ಸ್ ಪೋಸ್ಟ್ನಲ್ಲಿ, ‘ಇಂದು ಸಂಜೆ ಅಫ್ಘಾನ್ ವಿದೇಶಾಂಗ ಸಚಿವ ಮೌಲವಿ ಆಮಿರ್ ಖಾನ್ ಮುತ್ತಕಿ ಅವರೊಂದಿಗೆ ಸೌಹಾರ್ದಯುತ ಮಾತುಕತೆಯನ್ನು ನಡೆಸಿದ್ದೇನೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಅವರು ಖಂಡಿಸಿದ್ದನ್ನು ಹೃತ್ಪೂರ್ವಕವಾಗಿ ಶ್ಲಾಘಿಸುತ್ತೇನೆ. ಸುಳ್ಳು ಮತ್ತು ಆಧಾರರಹಿತ ವರದಿಗಳ ಮೂಲಕ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಅಪನಂಬಿಕೆಯನ್ನು ಸೃಷ್ಟಿಸುವ ಪ್ರಯತ್ನಗಳನ್ನು ಅವರು ದೃಢವಾಗಿ ತಿರಸ್ಕರಿಸಿದ್ದನ್ನು ಸ್ವಾಗತಿಸುತ್ತೇನೆ’ ಎಂದು ಭಾರತದ ಕ್ಷಿಪಣಿಗಳು ಅಫ್ಘಾನಿಸ್ತಾನವನ್ನು ಅಪ್ಪಳಿಸಿವೆ ಎಂಬ ಪಾಕಿಸ್ತಾನದಲ್ಲಿನ ವರದಿಗಳನ್ನು ಉಲ್ಲೇಖಿಸಿ ಹೇಳಿದ್ದಾರೆ. ಈ ವರದಿಗಳನ್ನು ಹಾಸ್ಯಾಸ್ಪದ ಎಂದು ಭಾರತವು ಬಣ್ಣಿಸಿತ್ತು.
ಭಾರತವು ಇನ್ನೂ ಅಫ್ಘಾನಿಸ್ತಾನಕ್ಕೆ ಮಾನ್ಯತೆಯನ್ನು ನೀಡಿರದಿದ್ದರೂ, ಮಾನವೀಯ ಮತ್ತು ಅಭಿವೃದ್ಧಿ ನೆರವನ್ನು ಒದಗಿಸುತ್ತಿದೆ.
ವಿದೇಶಾಂಗ ಸಚಿವ ಮುತ್ತಕಿ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿರುವ ತಾಲಿಬಾನ್ ವಿದೇಶಾಂಗ ಸಚಿವಾಲಯವು, ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಲವರ್ಧನೆ, ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಹೆಚ್ಚಿಸುವ ಕುರಿತು ಚರ್ಚಿಸಿದರು. ಭಾರತವು ಪ್ರದೇಶದಲ್ಲಿಯ ಒಂದು ಪ್ರಮುಖ ದೇಶ ಎಂದು ಬಣ್ಣಿಸಿದ ಮುತ್ತಕಿ, ಅಫ್ಘಾನಿಸ್ತಾನದೊಂದಿಗಿನ ಐತಿಹಾಸಿಕ ಸಂಬಂಧಗಳನ್ನು ಎತ್ತಿ ತೋರಿಸಿದರು ಮತ್ತು ಈ ಸಂಬಂಧಗಳನ್ನು ಇನ್ನಷ್ಟು ಬಲಗೊಳಿಸುವ ಭರವಸೆಯನ್ನು ವ್ಯಕ್ತಪಡಿಸಿದರು. ಸಮತೋಲಿತ ನೀತಿಯ ಮೂಲಕ ಎಲ್ಲ ಪಕ್ಷಗಳೊಂದಿಗೆ ಸಕಾರಾತ್ಮಕ ಸಂಬಂಧಗಳನ್ನು ಕಾಯ್ದುಕೊಳ್ಳುವುದಕ್ಕೆ ಒತ್ತು ನೀಡಿದ ಅವರು, ಅಫ್ಘಾನ್ ವ್ಯಾಪಾರಿಗಳು ಮತ್ತು ರೋಗಿಗಳಿಗೆ ಭಾರತೀಯ ವೀಸಾ ಸೌಲಭ್ಯಕ್ಕಾಗಿ ಮತ್ತು ಭಾರತದ ಜೈಲುಗಳಲ್ಲಿರುವ ಅಫ್ಘಾನ್ ಕೈದಿಗಳನ್ನು ಬಿಡುಗಡೆಗೊಳಿಸಿ ಸ್ವದೇಶಕ್ಕೆ ಮರಳಿ ಕಳುಹಿಸುವಂತೆ ವಿನಂತಿಯನ್ನೂ ಮಾಡಿಕೊಂಡರು ಎಂದು ಹೇಳಿದೆ.
ಎಪ್ರಿಲ್ ಕೊನೆಯ ವಾರದಲ್ಲಿ ಭಾರತ ಸರಕಾರವು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್ ಉಸ್ತುವಾರಿಯಾಗಿರುವ ಜಂಟಿ ಕಾರ್ಯದರ್ಶಿ ಎಂ.ಆನಂದ್ ಪ್ರಕಾಶ್ ಅವರನ್ನು ಕಾಬೂಲಿಗೆ ರವಾನಿಸಿತ್ತು. ಆದರೆ ಅವರು ಕಾಬೂಲ್ ತಲುಪುವ ಮುನ್ನವೇ ಅಫ್ಘಾನ್ ವಿದೇಶಾಂಗ ಸಚಿವಾಲಯವು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿತ್ತು.







