ಆಪರೇಷನ್ ಸಿಂಧೂರ್ | 15 ತಿಂಗಳ ಬಳಿಕ ಬಳಿಕ ಜೈಷ್ ನೆಲೆ ಮರು ನಿರ್ಮಾಣ: ವರದಿ

Photo Credit : Reuters
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಧ್ವಂಸಗೊಂಡಿದ್ದ ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಷ್-ಇ-ಮುಹಮ್ಮದ್ ನ 'ಭಯೋತ್ಪಾದಕ ನೆಲೆ:ಯನ್ನು 15 ತಿಂಗಳ ಬಳಿಕ ಸಂಪೂರ್ಣವಾಗಿ ಮರು ನಿರ್ಮಿಸಲಾಗಿದೆ ಎಂದು ಉಪಗ್ರಹ ಚಿತ್ರಗಳನ್ನು ಉಲ್ಲೇಖಿಸಿ India Today ವರದಿ ಮಾಡಿದೆ.
2025ರ ಮೇ 7ರಂದು ಭಾರತೀಯ ವಾಯುಪಡೆಯು ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಜೈಷ್-ಇ-ಮುಹಮ್ಮದ್ ನ ಮುಖ್ಯ ಕಚೇರಿ ಮೇಲೆ ವಾಯುದಾಳಿ ನಡೆಸಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಈ ಭಯೋತ್ಪಾದಕ ನೆಲೆಯ ಕಟ್ಟಡಗಳನ್ನು ಅಮೃತಶಿಲೆ ಅಳವಡಿಕೆ, ಪ್ಲಾಸ್ಟರಿಂಗ್ ಹಾಗೂ ಬಣ್ಣ ಬಳಿಯುವ ಮೂಲಕ ನವೀಕರಿಸಲಾಗಿದೆ ಎಂದು ವರದಿಯಾಗಿದೆ.
India Todayಗೆ ಲಭ್ಯವಾಗಿರುವ ಉಪಗ್ರಹ ಚಿತ್ರಗಳಲ್ಲಿ ಕಟ್ಟಡಗಳನ್ನು ನವೀಕರಿಸಿರುವುದು ಹಾಗೂ ಆಪರೇಷನ್ ಸಿಂಧೂರ್/ನಿಂದ ಉಂಟಾಗಿದ್ದ ಹಾನಿಯನ್ನು ದುರಸ್ತಿ ಮಾಡಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.
ಮುಖ್ಯ ಸಂಕೀರ್ಣಕ್ಕೆ ಹೊಂದಿಕೊಂಡಿದ್ದ ಹಾನಿಗೊಳಗಾದ ಕಟ್ಟಡಗಳನ್ನು ತೆರವುಗೊಳಿಸಲಾಗಿದ್ದು, ಆ ಸ್ಥಳದಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಹಾನಿಗೊಳಗಾದ ಕಟ್ಟಡಗಳಲ್ಲಿ ಮದ್ರಸಾ ಅಲ್-ಸಬೀರ್ ಮತ್ತು ಜೈಷ್-ಇ-ಮುಹಮ್ಮದ್ ಕಮಾಂಡರ್ ಗಳ ವಸತಿ ಸಂಕೀರ್ಣಗಳು ಸೇರಿವೆ ಎಂದು ಹೇಳಲಾಗಿದೆ.
25 ಕೋಟಿ ಪಾಕಿಸ್ತಾನಿ ರೂ. ವೆಚ್ಚ
ಆಪರೇಷನ್ ಸಿಂಧೂರ್ ನಲ್ಲಿ ಹಾನಿಗೊಳಗಾದ ಜೈಷ್-ಇ-ಮುಹಮ್ಮದ್ನ ಭಯೋತ್ಪಾದಕ ನೆಲೆಯನ್ನು ದುರಸ್ತಿ ಮಾಡಲು ಕಂತುಗಳಲ್ಲಿ 25 ಕೋಟಿ ಪಾಕಿಸ್ತಾನಿ ರೂ. ವೆಚ್ಚ ಮಾಡಲಾಗಿದೆ ಎಂದು ಗುಪ್ತಚರ ಮಾಹಿತಿಗಳನ್ನು ಉಲ್ಲೇಖಿಸಿ India Today ವರದಿ ಮಾಡಿದೆ.
ಭಯೋತ್ಪಾದಕ ನೆಲೆಯ ಕೇಂದ್ರ ಸಭಾಂಗಣದಲ್ಲಿ ಉಂಟಾಗಿದ್ದ ಕುಳಿಗಳನ್ನು ಭರ್ತಿ ಮಾಡಲಾಗಿದ್ದು, ಹಾನಿಗೊಳಗಾಗಿದ್ದ ಗೋಪುರಗಳನ್ನು ದುರಸ್ತಿ ಮಾಡಲಾಗಿದೆ. ಕೇಂದ್ರ ಸಭಾಂಗಣದ ದುರಸ್ತಿಗೆ ಸುಮಾರು 11 ಕೋಟಿ ಪಾಕಿಸ್ತಾನಿ ರೂ. ವೆಚ್ಚ ಮಾಡಲಾಗಿದೆ ಎಂದು ವರದಿಯಾಗಿದೆ.






