ಜಾಮಿಯಾ ಪ್ರತಿಭಟನೆ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಪೌರ ಹಕ್ಕುಗಳ ಸಂಘಟನೆ ಆಗ್ರಹ

Photo: x.com/ifrahmufti
ಹೊಸದಿಲ್ಲಿ: ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸುವಂತೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಪೌರ ಹಕ್ಕುಗಳ ಸಂಘಟನೆ ‘ಜನ್ ಹಸ್ತಕ್ಷೇಪ್’ ಮಂಗಳವಾರ ಒತ್ತಾಯಿಸಿದೆ.
ವಿಶ್ವವಿದ್ಯಾಲಯದಲ್ಲಿ 2006ರಿಂದ ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿಲ್ಲ. ವಿದ್ಯಾರ್ಥಿ ಸಂಘದ ಸಂವಿಧಾನಕ್ಕೆ ಅನುಮೋದನೆ ದೊರೆತ 15 ದಿನಗಳಲ್ಲಿ ಚುನಾವಣೆ ನಡೆಸಲಾಗುವುದು ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ತಿಳಿಸಿದೆ. ಆದರೆ, ಚುನಾವಣೆಗೆ ನಿರ್ದಿಷ್ಟ ದಿನಾಂಕ ಪ್ರಕಟಿಸಬೇಕು ಹಾಗೂ ಸಂವಿಧಾನದ ಅನುಮೋದನೆಗೆ ನಿಖರ ಕಾಲಮಿತಿ ನಿಗದಿಪಡಿಸಬೇಕು ಎಂದು ಪಟ್ಟುಹಿಡಿದಿರುವ ವಿದ್ಯಾರ್ಥಿಗಳ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮತ್ತು ಶಾಂತಿಯುತ ಧರಣಿ 16ನೇ ದಿನಕ್ಕೆ ಕಾಲಿಟ್ಟಿದೆ.
ಸೋಮವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದ ‘ಜನ್ ಹಸ್ತಕ್ಷೇಪ್’ನ ಐವರು ಸದಸ್ಯರ ಸತ್ಯಶೋಧನಾ ಸಮಿತಿಯು, ಆಡಳಿತ ಮಂಡಳಿ ಮತ್ತು ದಿಲ್ಲಿ ಪೊಲೀಸರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡಿರುವ ದಂಡನಾತ್ಮಕ ಕ್ರಮಗಳನ್ನು ತೀವ್ರವಾಗಿ ಖಂಡಿಸಿದೆ. ತಕ್ಷಣವೇ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ವಿದ್ಯಾರ್ಥಿ ಸಂಘದ ಚುನಾವಣೆ ಮರುಸ್ಥಾಪನೆಗೆ ನಿರ್ದೇಶನ ನೀಡಬೇಕು, ಸಂವಿಧಾನ ರಚಿಸಿ ನಿಗದಿತ ಗಡುವಿನೊಳಗೆ ಚುನಾವಣೆ ನಡೆಸಬೇಕು ಹಾಗೂ ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಜರುಗಿಸಲಾದ ಎಲ್ಲ ಶಿಸ್ತು ಕ್ರಮಗಳನ್ನು ಹಿಂಪಡೆಯಬೇಕು ಎಂದು ಸಂಘಟನೆ ಆಗ್ರಹಿಸಿದೆ.






