ಆನ್ಲೈನ್ ತರಗತಿಗಳಲ್ಲೂ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿ ಸಂಘದ ಪುನಃಸ್ಥಾಪನೆಗೆ ಆಗ್ರಹಿಸಿ ಪ್ರೊಫೈಲ್ ಚಿತ್ರಗಳನ್ನೇ ಪೋಸ್ಟರ್ ಗಳಾಗಿಸಿದ ವಿದ್ಯಾರ್ಥಿಗಳು

Photo Credit : PTI
ಹೊಸದಿಲ್ಲಿ: ವಿದ್ಯಾರ್ಥಿ ಸಂಘದ ಪುನಃಸ್ಥಾಪನೆಗೆ ಆಗ್ರಹಿಸಿ ನಡೆಯುತ್ತಿರುವ ಚಳವಳಿಯ ನಡುವೆಯೇ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳ ಮೂಲಕವೂ ಪ್ರತಿಭಟನೆ ಮುಂದುವರಿಸಿದ್ದಾರೆ ಎಂದು maktoobmedia.com ವರದಿ ಮಾಡಿದೆ.
ವಿಶ್ವವಿದ್ಯಾಲಯವು ನೇರ ತರಗತಿಗಳನ್ನು ಸ್ಥಗಿತಗೊಳಿಸಿ ಆನ್ಲೈನ್ ಬೋಧನೆಗೆ ಬದಲಾಯಿಸಿದ ಬಳಿಕ, ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಗೆ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಆನ್ ಲೈನ್ ತರಗತಿಗಳ ವೇಳೆ ತಮ್ಮ ಪ್ರೊಫೈಲ್ ಚಿತ್ರಗಳನ್ನು ಪ್ರತಿಭಟನಾ ಪೋಸ್ಟರ್ ಗಳಾಗಿ ಬದಲಾಯಿಸಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
‘JMISU ಅನ್ನು ಪುನಃಸ್ಥಾಪಿಸಿ’, ‘ನನ್ನ ಅಸ್ತಿತ್ವವನ್ನು ಗೌರವಿಸಿ ಅಥವಾ ನನ್ನ ಪ್ರತಿರೋಧವನ್ನು ಎದುರಿಸಲು ಸಿದ್ಧರಾಗಿ’ ಹಾಗೂ ‘ಪ್ರಾಧ್ಯಾಪಕರೇ ಮತ್ತು ಜಾಮಿಯಾ ಆಡಳಿತವೇ, ನಿಮಗೆ ನಾಚಿಕೆಯಾಗಬೇಕು’ ಎಂಬ ಸಂದೇಶಗಳನ್ನು ಪೋಸ್ಟರ್ ಗಳಲ್ಲಿ ಪ್ರದರ್ಶಿಸಲಾಗುತ್ತಿದೆ.
ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ವಿಶ್ವವಿದ್ಯಾಲಯದ ಆಡಳಿತವು ನೇರ ತರಗತಿಗಳ ಬದಲಿಗೆ ಆನ್ ಲೈನ್ ಬೋಧನೆಗೆ ಮೊರೆ ಹೋಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಕ್ಯಾಂಪಸ್ ನಲ್ಲಿ ಗುಂಪುಗೂಡುವುದಕ್ಕೆ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ವರ್ಚುವಲ್ ತರಗತಿಗಳನ್ನೇ ಪ್ರತಿಭಟನೆಯ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
‘ಪ್ರತಿಭಟನೆಗೆ ಗಡಿಗಳಿಲ್ಲ, ಪರದೆಗಳೂ ಅಡ್ಡಿಯಾಗುವುದಿಲ್ಲ’ ಎಂಬ ಸಂದೇಶದೊಂದಿಗೆ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.






