370ನೇ ವಿಧಿ ರದ್ದತಿ ಬಳಿಕ ಜಮ್ಮುಕಾಶ್ಮೀರದಲ್ಲಿ 631 ಅನಿವಾಸಿಗಳಿಂದ ಜಮೀನು ಖರೀದಿ

ಸಾಂದರ್ಭಿಕ ಚಿತ್ರ | Photo Credit : PTI
ಶ್ರೀನಗರ,ಅ.31:ಸಂವಿಧಾನದ 370ನೇ ವಿಧಿ ರದ್ದತಿಯಾದಾಗಿನಿಂದ ಜಮ್ಮುಕಾಶ್ಮೀರದಲ್ಲಿ 386 ಗುಂಟೆಗೂ ಅಧಿಕ ಜಮೀನನ್ನು ಒಟ್ಟು 631 ಅನಿವಾಸಿಗಳು ಖರೀದಿಸಿದ್ದಾರೆಂದು ಕೇಂದ್ರಾಡಳಿತ ಸರಕಾರವು ಶುಕ್ರವಾರ ವಿಧಾನಸಭೆಗೆ ತಿಳಿಸಿದೆ.
ಶಾಸಕ ಶೇಖ್ ಅಹ್ಸಾನ್ ಅಹ್ಮದ್ ಅವರು ಸದನದಲ್ಲಿ ಈ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಂದಾಯ ಸಚಿವರು,ಜಮ್ಮು ಪ್ರಾಂತವೊಂದರಲ್ಲೇ 378 ಅನಿವಾಸಿಗಳು 212 ಗುಂಟೆಗಳನ್ನು, 13 ಮಾರ್ಲಾ ( 1 ಮಾರ್ಲಾ ಅಂದರೆ 272.25 ಚದರ ಅಡಿ) ಹಾಗೂ 128 ಚದರ ಅಡಿ ಜಮೀನುಗಳನ್ನು ಖರೀದಿಸಿದ್ದಾರೆಂದು ಮಾಹಿತಿ ನೀಡಿದರು.
2020ಲ್ಲಿ ಜಮ್ಮುಕಾಶ್ಮೀರದಲ್ಲಿ ಅನಿವಾಸಿಯೊಬ್ಬರು 10.6 ಲಕ್ಷ ರೂ. ನೀಡಿ 1 ಗುಂಟೆ ಜಮೀನನ್ನು ಖರೀದಿಸಿದ್ದಾರೆಂದು ಸಚಿವರು ತಿಳಿಸಿದ್ದಾರೆ.
ಸಂವಿಧಾನದ 370ನೇ ವಿಧಿ ರದ್ದತಿಯ ಆನಂತರ ಜಮ್ಮುಕಾಶ್ಮೀರದಲ್ಲಿ ಅನಿವಾಸಿಗಳಿಂದ ಜಮೀನು ಖರೀದಿಯಲ್ಲಿ ತೀವ್ರ ಏರಿಕೆಯಾಗಲಿದೆ ಎಂದರು.
2021ರಲ್ಲಿ 57 ಮಂದಿ ಅನಿವಾಸಿಗಳು ಒಟ್ಟು 5.48 ಕೋಟಿ ರೂ. ಮೊತ್ತದ 24 ಗುಂಟೆಗಳು, 15 ಮಾರ್ಲಾಗಳು ಹಾಗೂ 69 ಚದರ ಅಡಿ ವಿಸ್ತೀರ್ಣದ ಜಮೀನುಗಳನ್ನು ಖರೀದಿಸಿದ್ದಾರೆ. ಮಾರನೆಯ ವರ್ಷ 127 ಮಂದಿ ಬಾಹ್ಯ ವ್ಯಕ್ತಿಗಳು, 19.55 ಕೋಟಿ ರೂ. ವೆಚ್ಚದಲ್ಲಿ 106 ಗುಂಟೆಗಳು, 10 ಮಾರ್ಲಾಗಳು ಹಾಗೂ 136 ಚದರ ಅಡಿ ಜಮೀನನ್ನು ಖರೀದಿಸಿದ್ದರು. 2023ರಲ್ಲಿ 119 ಮಂದಿ ಅನಿವಾಸಿ ಭಾರತೀಯರು 54 ಗುಂಟೆಗಳನ್ನು, 5 ಮಾರ್ಲಾಗಳನ್ನು ಹಾಗೂ 72 ಚದರ ಅಡಿ ಜಮೀನನ್ನು 25.33 ಕೋಟಿ ರೂ.ಗೆ ಖರೀದಿಸಿದ್ದಾರೆಂದು ಸಚಿವರು ಸದನಕ್ಕೆ ತಿಳಿಸಿದರು.
ಜಮ್ಮುಕಾಶ್ಮೀರದಲ್ಲಿ ಹೊರಗಿನವರಿಂದ ಜಮೀನು ಖರೀದಿಯ ಪ್ರವೃತ್ತಿಯು 2024ರಲ್ಲೂ ಮೇಲ್ಮುಖವಾಗಿಯೇ ಮುಂದುವರಿದಿತ್ತು. ಕಳೆದ ವರ್ಷ 169 ಅನಿವಾಸಿಗಳು 92 ಗುಂಟೆಗಳನ್ನು, 17 ಮಾರ್ಲಾಗಳನ್ನು ಹಾಗೂ 77 ಚದರ ಅಡಿ ಜಮೀನನ್ನು 42.32 ಕೋಟಿ ರೂ.ಗೆ ಖರೀದಿಸಿದ್ದರು. 2025ರಲ್ಲಿ 158 ಬಾಹ್ಯವ್ಯಕ್ತಿಗಳು 106 ಗುಂಟೆಗಳನ್ನು, 11 ಮಾರ್ಲಾಗಳನ್ನು ಹಾಗೂ 37.17 ಕೋಟಿ ಜಮೀನನ್ನು 201 ಚದರ ಅಡಿಗೆ ಖರೀದಿಸಿದ್ದರು ಎಂದು ಸಚಿವರು ಸದನಕ್ಕೆ ತಿಳಿಸಿದರು.
ಸಂವಿಧಾನದ 370ನೇ ವಿಧಿ ರದ್ದತಿಗೆ ಮುನ್ನ, ಜಮ್ಮುಕಾಶ್ಮೀರದಲ್ಲಿ ಸ್ಥಳೀಯರಲ್ಲದವರು ಜಮೀನು ಖರೀದಿಸುವುದಕ್ಕೆ ನಿಷೇಧವಿತ್ತು.







