Jammu & Kashmir | ಕುಲ್ಗಾಮ್ ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ: ಇಬ್ಬರು ಭಯೋತ್ಪಾದಕರ ಹತ್ಯೆ

Photo Credit : NDTV
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರೆ ತೈಬಾ (LeT) ಸಂಘಟನೆಯ ಸದಸ್ಯ ಲತೀಫ್ ಭಟ್ ಸೇರಿದಂತೆ ಇಬ್ಬರು ಭಯೋತ್ಪಾದಕರು ಮೃತಪಟ್ಟಿದ್ದಾರೆ.
ಕಳೆದ ವಾರ ಕುಲ್ಗಾಮ್ ನಲ್ಲಿರುವ CRPF ನೆಲೆ ಮೇಲೆ ನಡೆದ ದಾಳಿಯ ಬೆನ್ನಲ್ಲೇ ಭದ್ರತಾ ಪಡೆಗಳು ಈ ಕಾರ್ಯಾಚರಣೆ ಕೈಗೊಂಡಿದ್ದವು. ನ. 11ರಂದು ಭಾರಿ ಶಸ್ತ್ರಸಜ್ಜಿತರಾಗಿದ್ದ ಇಬ್ಬರು ಭಯೋತ್ಪಾದಕರು CRPF ನೆಲೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಮೂವರು CRPF ಸಿಬ್ಬಂದಿ ಗಾಯಗೊಂಡಿದ್ದರು.
ದಾಳಿ ನಡೆಸಿದ ಭಯೋತ್ಪಾದಕರು ಕುಲ್ಗಾಮ್ ಪ್ರದೇಶದಲ್ಲಿ ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಭದ್ರತಾ ಪಡೆಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ನೀಡಿದ ಮಾಹಿತಿಯ ಆಧಾರದಲ್ಲಿ ಖುದ್ವಾನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಕಾರ್ಯಾಚರಣೆ ಆರಂಭಿಸಿದ ಮರುದಿನ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಹತರಾದವರಲ್ಲಿ ಲಷ್ಕರೆ-ತೈಬಾ ಸಂಘಟನೆಯ ಸದಸ್ಯ ಲತೀಫ್ ಭಟ್ ಒಬ್ಬನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ಸೇನಾ ಅಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕ (DGP) ನಳಿನ್ ಪ್ರಭಾತ್ ಹಾಗೂ ಕಾಶ್ಮೀರ ವಲಯದ ಪೊಲೀಸ್ ಮಹಾನಿರೀಕ್ಷಕ (IGP) ಸುಜಿತ್ ಕುಮಾರ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಯಿತು. ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಶೋಧ ಕಾರ್ಯಾಚರಣೆ ನಡೆದ ಪ್ರದೇಶದ ಎಲ್ಲ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಬಂದ್ ಮಾಡಲಾಗಿತ್ತು.
ನ.12ರಂದು ಕಿಶ್ತ್ವಾರ್ ಜಿಲ್ಲೆಯ ದುರ್ಗಮ ದಾಚನ್ ಅರಣ್ಯ ಪ್ರದೇಶದಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (SPOs) ಮೃತದೇಹಗಳು ಪತ್ತೆಯಾಗಿದ್ದವು. ಅವರ ದೇಹಗಳ ಮೇಲೆ ಗುಂಡೇಟಿನ ಗುರುತುಗಳಿದ್ದವು.






