ಜಮ್ಮುಕಾಶ್ಮೀರ | ಕ್ವಾರ್ ಜಲ ವಿದ್ಯುತ್ ಯೋಜನೆ ಬಳಿ ಭಾರೀ ಭೂಕುಸಿತ : ಅವಶೇಷಗಳಡಿ ಸಿಲುಕಿಕೊಂಡ ಹಲವು ವಾಹನಗಳು

Photo Credit : PTI
ಶ್ರೀನಗರ, ಜು. 6: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ 540 ಮೆಗಾವ್ಯಾಟ್ ಸಾಮರ್ಥ್ಯದ ಕ್ವಾರ್ ಜಲ ವಿದ್ಯುತ್ ಯೋಜನೆ ಸ್ಥಳದ ಸಮೀಪ ಸೋಮವಾರ ಸುರಿದ ಭಾರೀ ಮಳೆಯಿಂದ ಭೀಕರ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣು, ಕಲ್ಲು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ.
ಕಿಶ್ತ್ವಾರ್ನ ಚೆನಾಬ್ ನದಿ ಮೇಲೆ ನಿರ್ಮಾಣವಾಗುತ್ತಿರುವ ಈ ಕ್ವಾರ್ ಜಲ ವಿದ್ಯುತ್ ಯೋಜನೆಯನ್ನು ‘ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ ಲಿಮಿಟೆಡ್’ (ಸಿವಿಪಿಪಿಎಲ್) ಅಭಿವೃದ್ಧಿಪಡಿಸುತ್ತಿದೆ.
ಯೋಜನಾ ಸ್ಥಳದ ಬಳಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಹಲವು ವಾಹನಗಳು ಹಾಗೂ ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದ ಅನೇಕ ವಾಹನಗಳು ರಸ್ತೆಯ ಬಹುದೊಡ್ಡ ಭಾಗವನ್ನು ಆವರಿಸಿಕೊಂಡಿರುವ ಭಾರೀ ಪ್ರಮಾಣದ ಮಣ್ಣು, ಕಲ್ಲು ಮತ್ತು ಅವಶೇಷಗಳ ರಾಶಿ ಅಡಿಯಲ್ಲಿ ಹೂತು ಹೋಗಿವೆ.
ಭೂಕುಸಿತದಿಂಗಾಗಿ ರಸ್ತೆಯ ಒಂದು ಭಾಗಕ್ಕೆ ಹಾನಿಯಾಗಿದೆ. ಆದರೆ, ತತ್ಕ್ಷಣಕ್ಕೆ ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ರಸ್ತೆಯಿಂದ ಅವಶೇಷಗಳನ್ನು ತೆರವುಗೊಳಿಸಿ, ರಸ್ತೆಯನ್ನು ಮತ್ತೆ ಸಂಚಾರ ಯೋಗ್ಯವಾಗಿಸಲು ಆಡಳಿತ ಕಾರ್ಯಾಚರಣೆ ಆರಂಭಿಸಿದೆ.






