ಜಾರ್ಖಂಡ್| ಸರಕಾರಿ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ: ತಾಯಿ-ನವಜಾತ ಶಿಶು ಮೃತ್ಯು

ಸಾಂದರ್ಭಿಕ ಚಿತ್ರ | Photo Credit : magnific
ಸರೈಕಲಾ(ಜಾರ್ಖಂಡ್): ಆಸ್ಪತ್ರೆಯಲ್ಲಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ, ಮೊಬೈಲ್ ಫೋನ್ ಬೆಳಕಿನಲ್ಲಿಯೇ ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿರುವ ಘಟನೆ ಸರೈಕಲಾ-ಖರ್ಸಾವನ್ ಜಿಲ್ಲೆಯ ರಾಜನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಇದರ ಬೆನ್ನಿಗೇ, ತಾಯಿ ಮತ್ತು ನವಜಾತ ಶಿಶು ಇಬ್ಬರೂ ಮೃತಪಟ್ಟಿದ್ದಾರೆ.
ಹತಿಶೀರಿಂಗ್ ಪ್ರದೇಶದ ಸಮುದಾಯ ಆರೋಗ್ಯ ಕಾರ್ಯಕರ್ತೆ ಬಿನಿತಾ ಬನ್ರಾ ಅವರನ್ನು ಗುರುವಾರ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿನಿತಾ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಆಸ್ಪತ್ರೆಯಲ್ಲಿ ಜನರೇಟರ್ ಅಥವಾ ಇನ್ವರ್ಟರ್ ವ್ಯವಸ್ಥೆ ಇಲ್ಲದೆ ಇದ್ದುದರಿಂದ, ವೈದ್ಯರು ಹಾಗೂ ದಾದಿಯರು ಮೊಬೈಲ್ ಫೋನ್ ಟಾರ್ಚ್ ಬೆಳಕು ಹಿಡಿದು ಹೆರಿಗೆ ಮಾಡಿಸಿದ್ದಾರೆ. ಅವರ ನಿರ್ಲಕ್ಷ್ಯದಿಂದಾಗಿ ನನ್ನ ಪತ್ನಿ ಮತ್ತು ಗಂಡು ಮಗು ಮೃತಪಟ್ಟಿದ್ದಾರೆ ಎಂದು ಬಿನಿತಾ ಪತಿ ದುರ್ಗಾ ಚರಣ್ ಆರೋಪಿಸಿದ್ದಾರೆ.
ಈ ಕುರಿತು ಸ್ಪಷ್ಟೀಕರಣ ನೀಡಿರುವ ಆಸ್ಪತ್ರೆಯ ಉಸ್ತುವಾರಿ ವೈದ್ಯ ಡಾ. ಶ್ಯಾಮ್ ಸೊರೇನ್, “ಆ ಸಮಯದಲ್ಲಿ ಗುಡುಗು ಸಹಿತ ಮಳೆಯಾಗುತ್ತಿತ್ತು. ಹೀಗಾಗಿ, ಸರಕಾರಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ದುರದೃಷ್ಟವಶಾತ್ ಸೌರ ವ್ಯವಸ್ಥೆ, ಇನ್ವರ್ಟರ್ ಮತ್ತು ಜನರೇಟರ್ ಕೂಡಾ ತಾಂತ್ರಿಕ ದೋಷದಿಂದ ಕೆಟ್ಟು ಹೋಗಿದ್ದವು. ಹೆರಿಗೆ ಬಳಿಕ, ಅತಿಯಾದ ರಕ್ತಸ್ರಾವದಿಂದ ಮಹಿಳೆ ಮೃತಪಟ್ಟಿದ್ದಾರೆ” ಎಂದು ಹೇಳಿದ್ದಾರೆ.
“ಆಸ್ಪತ್ರೆಯಲ್ಲಿ ಇನ್ವರ್ಟರ್, ಸೌರ ವ್ಯವಸ್ಥೆ ಮತ್ತು ಜನರೇಟರ್ ಗಳಿದ್ದರೂ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಿದ್ದು ಏಕೆ ಎಂಬ ಕುರಿತು ತನಿಖೆ ನಡೆಸಲಾಗುವುದು. ಎಸ್ಡಿಎಂ ಅಭಿನವ್ ಪ್ರಕಾಶ್ ನೇತೃತ್ವದ ಸಮಿತಿಯು ಇಂದು ಸಂಜೆಯೊಳಗೆ ವರದಿ ಸಲ್ಲಿಸಲಿದೆ” ಎಂದು ಜಿಲ್ಲಾಧಿಕಾರಿ ನಿತೀಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಈ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಆದಿತ್ಯ ಸಾಹು ತೀವ್ರವಾಗಿ ಖಂಡಿಸಿದ್ದು, “ಜಾರ್ಖಂಡ್ ನ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸುವಂತಾಗಿರುವುದು ನಾಚಿಕೆಗೇಡಿನ ಸಂಗತಿ. ಈ ಸರಕಾರಕ್ಕೆ ಮಾನವೀಯತೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.






