Jharkhand | 3 ವರ್ಷದ ಮಗುವಿನ ಅತ್ಯಾಚಾರ; ಆರೋಪಿಗೆ 1 ಲಕ್ಷ ರೂ. ದಂಡ ವಿಧಿಸಿ ಪ್ರಕರಣ ಮುಚ್ಚಿಹಾಕಿದ ಪಂಚಾಯತ್!

ಸಾಂದರ್ಭಿಕ ಚಿತ್ರ (AI)
ರಾಂಚಿ: ಮೂರು ವರ್ಷದ ಹೆಣ್ಣು ಮಗುವಿನ ಮೇಲಿನ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕುವ ಯತ್ನದಲ್ಲಿ, ಹಳ್ಳಿ ಪಂಚಾಯತ್ ಒಂದು ಪೊಲೀಸರಿಗೆ ದೂರು ನೀಡುವ ಬದಲಾಗಿ ಆರೋಪಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿರುವ ಆಘಾತಕಾರಿ ಘಟನೆಯೊಂದು ಜಾರ್ಖಂಡ್ ನ ಗುಮ್ಲಾ ಜಿಲ್ಲೆಯಲ್ಲಿ ವರದಿಯಾಗಿದೆ. ಆರೋಪಿ ಸ್ಥಳದಲ್ಲೇ 20,000 ರೂಪಾಯಿಗಳನ್ನು ಪಾವತಿಸಿದ್ದು, ಈ ಹಣವನ್ನು ಪಂಚಾಯತ್ ನ ಕೆಲವು ಸದಸ್ಯರು ಮಟನ್ ಮತ್ತು ಮದ್ಯದೊಂದಿಗೆ ಔತಣಕೂಟ ಏರ್ಪಡಿಸಲು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಅತ್ಯಾಚಾರ ಪ್ರಕರಣದ ಆರೋಪಿಯನ್ನು ಸುನಿಲ್ ಲೋಹ್ರಾ ಎಂದು ಗುರುತಿಸಲಾಗಿದೆ.
ಗುಮ್ಲಾ ಜಿಲ್ಲೆಯ ಘಾಘ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲ್ಮಾ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದೆ. ಪ್ರಕರಣದ ಮಾಹಿತಿ ಪಡೆದ ಪೊಲೀಸರು ಕೂಡಲೇ ಗ್ರಾಮಕ್ಕೆ ಧಾವಿಸಿ, ಸಂತ್ರಸ್ತೆಯ ತಾಯಿಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಸಂತ್ರಸ್ತೆಯ ಮನೆಗೆ ಬಂದಿದ್ದನು. ಆ ಸಮಯದಲ್ಲಿ ಮಗು ತನ್ನ ತಾಯಿಯೊಂದಿಗೆ ಮನೆಯಲ್ಲಿತ್ತು. ತಾಯಿ ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಹಾಯವಾಗಲೆಂದು, ಮಗುವನ್ನು ತಾನು ನೋಡಿಕೊಳ್ಳುವುದಾಗಿ ಸುನಿಲ್ ಹೇಳಿದ್ದನು. ನಂತರ ಅವನು ಮಗುವನ್ನು ಕೋಣೆಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಮಗು ಅಳಲು ಪ್ರಾರಂಭಿಸಿದಾಗ ಮಗುವಿನ ತಾಯಿ ಕೂಡಲೇ ಧಾವಿಸಿದ್ದು, ರಕ್ತಸ್ರಾವವಾಗುತ್ತಿರುವುದು ಕಂಡುಬಂದಿದೆ. ಮಗುವನ್ನು ಆರಂಭದಲ್ಲಿ ತಪಾಸಣೆಗಾಗಿ ಖಾಸಗಿ ವೈದ್ಯರ ಬಳಿಗೆ ಕರೆದೊಯ್ಯಲಾಗಿದೆ.
ಬಳಿಕ ಈ ವಿಷಯವನ್ನು ಗ್ರಾಮ ಪಂಚಾಯತ್ ಗಮನಕ್ಕೆ ತರಲಾಯಿತು. ರವಿವಾರ ಗ್ರಾಮದಲ್ಲಿ ಪಂಚಾಯತ್ ಸಭೆ ಕರೆಯಲಾಗಿದ್ದು, ಪ್ರಕರಣವನ್ನು ಮುಚ್ಚಿಹಾಕುವ ಉದ್ದೇಶದಿಂದ ಆರೋಪಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಗ್ರಾಮಸ್ಥರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಕೊಡಿಸುವ ಬದಲು ಗ್ರಾಮ ಪಂಚಾಯತ್ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಆರೋಪಿ ಸುನಿಲ್ ಲೋಹ್ರಾ ಸ್ಥಳದಲ್ಲೇ 20,000 ರೂಪಾಯಿಗಳನ್ನು ಪಾವತಿಸಿದ್ದು, ಈ ಹಣವನ್ನು ಪಂಚಾಯತ್ ನ ಕೆಲವು ಸದಸ್ಯರು ಮಟನ್ ಮತ್ತು ಮದ್ಯದೊಂದಿಗೆ ಔತಣಕೂಟ ಏರ್ಪಡಿಸಲು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಉಳಿದ ಸಂಪೂರ್ಣ ಹಣವನ್ನು ಒಂದು ವಾರದೊಳಗೆ ಜಮಾ ಮಾಡುವಂತೆ ಆರೋಪಿಗೆ ಎಚ್ಚರಿಕೆ ನೀಡಲಾಗಿತ್ತು.
"ಮುಖ್ಯ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆಯೇ ಎಂಬ ಆರೋಪದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಈ ಆರೋಪಗಳು ನಿಜವೆಂದು ಕಂಡುಬಂದರೆ, ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಗುಮ್ಲಾ ಎಸ್ಪಿ ಹಾರಿಸ್ ಬಿನ್ ಜಮಾನ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅರಂಗಿ ಪಂಚಾಯತ್ ಮುಖ್ಯಸ್ಥ ಲೋಡೋ ಎಕ್ಕಾ, ಈ ಘಟನೆಯ ಬಗ್ಗೆ ತಿಳಿದಿಲ್ಲ. ಪಂಚಾಯತ್ ಸಭೆಯ ಬಗ್ಗೆಯೂ ಯಾವುದೇ ಮಾಹಿತಿ ಇರಲಿಲ್ಲ. ಪೊಲೀಸರು ಬಂದ ಮೇಲಷ್ಟೇ ಈ ವಿಷಯ ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಆರೋಪಿಯನ್ನು ಸ್ಥಳದಲ್ಲೇ ಬಂಧಿಸಲಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಪಂಚಾಯತ್ ಸದಸ್ಯರ ಮೇಲಿರುವ ಆರೋಪಗಳ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.






