ಖಾನ್ ಸರ್ ವಿರುದ್ಧ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಪತ್ರಕರ್ತೆ ಅಂಜನಾ ಓಂ ಕಶ್ಯಪ್

ಅಂಜನಾ ಓಂ ಕಶ್ಯಪ್ - Photo Credit : x |ಖಾನ್ ಸರ್ - Photo Credit : NDTV
ಹೊಸದಿಲ್ಲಿ, ಜೂ. 7: ಪತ್ರಕರ್ತೆ ಅಂಜನಾ ಓಂ ಕಶ್ಯಪ್ ಹಾಗೂ ಟಿವಿ ಟುಡೇ ನೆಟ್ ವರ್ಕ್, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಶಿಕ್ಷಕ ಫೈಸಲ್ ಖಾನ್ (ಖಾನ್ ಸರ್) ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ 2 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿವೆ ಎಂದು livelaw.in ವರದಿ ಮಾಡಿದೆ.
‘ಸ್ಟಾರ್ ಟೀಚರ್ಸ್’ ಕುರಿತ ವರದಿಯನ್ನು ಉಲ್ಲೇಖಿಸಿ ಖಾನ್ ಸರ್ ಅವರು ಅಂಜನಾ ಓಂ ಕಶ್ಯಪ್ ಹಾಗೂ ಟಿವಿ ಟುಡೇ ನೆಟ್ವರ್ಕ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಹೇಳಿಕೆಗಳನ್ನು ನೀಡಿರುವುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿದೆ. ಹಣಕ್ಕಾಗಿ ಕೆಲಸ ಮಾಡುವ ಪತ್ರಕರ್ತರು , ದಲ್ಲಾಳಿಗಳು ಮತ್ತು ಸುಳ್ಳು ಸುದ್ದಿ ಹರಡುವವರು ಎಂಬ ಪದಗಳನ್ನು ಬಳಸಿ ತಮ್ಮ ಮಾನಹಾನಿ ಮಾಡಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.
ಈ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕುವಂತೆ ಹಾಗೂ 2 ಕೋಟಿ ರೂ. ಪರಿಹಾರ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಅರ್ಜಿಯ ಪ್ರಕಾರ, NEET ಪರೀಕ್ಷಾ ವ್ಯವಸ್ಥೆಗೆ ಸಂಬಂಧಿಸಿದ ನೇರ ಚರ್ಚೆಯ ವೇಳೆ ಅಂಜನಾ ಓಂ ಕಶ್ಯಪ್ ಅವರು ಆನ್ಲೈನ್ ಶಿಕ್ಷಕರನ್ನು ಟೀಕಿಸಿ, ಅವರನ್ನು ‘ವಂಚಕರು’ ಮತ್ತು ‘ಆನ್ಲೈನ್ನಲ್ಲಿ ಸಲಹೆ–ವಿವರಣೆ ನೀಡುವವರು’ ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಖಾನ್ ಸರ್ ಮೇಲ್ಕಂಡ ಹೇಳಿಕೆಗಳನ್ನು ನೀಡಿದ್ದರು ಎಂದು ಹೇಳಲಾಗಿದೆ.
ಪ್ರಕರಣವನ್ನು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರ ರಜಾ ಪೀಠ ಸೋಮವಾರ ವಿಚಾರಣೆ ನಡೆಸಲಿದೆ.






