ಅಸ್ಸಾಂ | ಪಂಚಾಯತ್ ಚುನಾವಣೆ ಕುರಿತು ವರದಿ ಮಾಡುತ್ತಿದ್ದ ಪತ್ರಕರ್ತನ ಮೇಲೆ ಗುಂಪು ದಾಳಿ

ಸಾಂದರ್ಭಿಕ ಚಿತ್ರ
ಅಸ್ಸಾಂ : ಧೇಮಾಜಿ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆ ಕುರಿತು ವರದಿ ಮಾಡುತ್ತಿದ್ದಾಗ ಗುಂಪೊಂದು ಪತ್ರಕರ್ತನ ಮೇಲೆ ಹಲ್ಲೆ ನಡೆಸಿದೆ. ಕಳೆದ ಒಂದು ವಾರದಲ್ಲಿ ಅಸ್ಸಾಂ ರಾಜ್ಯದಲ್ಲಿ ಪತ್ರಕರ್ತರ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.
ಅಸ್ಸಾಮಿ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಮಧುರ್ಜಯ ಸೈಕಿಯಾ ಅವರ ಮೇಲೆ ದಿಮೋವ್ ಪಠಾರ್ ಗ್ರಾಮದಲ್ಲಿ 25 ಕ್ಕೂ ಹೆಚ್ಚು ಜನರಿದ್ದ ಗುಂಪು ದಾಳಿ ನಡೆಸಿದೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸೈಕಿಯಾ ದಿಬ್ರುಗಢದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಲಾಪತ್ತರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ದಾಳಿಯ ಹಿಂದೆ ಸ್ಥಳೀಯ ನಾಯಕರ ಕೈವಾಡವಿದೆ ಎಂದು ಅವರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ತಪ್ಪಿತಸ್ಥರನ್ನು ಪತ್ತೆಹಚ್ಚಿ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಜೂನ್ 29 ರಂದು ಧೇಕಿಯಾಜುಲಿಯಲ್ಲಿ ಸ್ಥಳೀಯ ಟಿವಿ ಪತ್ರಕರ್ತೆ ಬಿಮಲ್ಜ್ಯೂತಿ ನಾಥ್ ಮತ್ತು ಅವರ ಸಹೋದ್ಯೋಗಿಯ ಮೇಲೆ ಹಲ್ಲೆ ನಡೆಸಲಾಗಿತ್ತು.