ಪ್ರತಿಭಾವಂತ ಯುವ ಪತ್ರಕರ್ತೆ ಸ್ನೇಹಾ ಬೆಲ್ಸಿನ್ ನಿಧನ

ಸ್ನೇಹಾ ಬೆಲ್ಸಿನ್ (Photo credit: X@Neelam_Culture)
ಚೆನ್ನೈ: ಯುವ ಪತ್ರಕರ್ತೆ ಮತ್ತು ಹೋರಾಟಗಾರ್ತಿ ಸ್ನೇಹಾ ಬೆಲ್ಸಿನ್ ಸೋಮವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಇಪ್ಪತ್ತಾರು ವರ್ಷ ವಯಸ್ಸಿನ ಸ್ನೇಹಾ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನ ಡಿಜಿಟಲ್ ಮತ್ತು ವೀಡಿಯೋ ತಂಡದಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಜಾತಿ ಮತ್ತು ಲಿಂಗಾಧರಿತ ವಿಷಯಗಳ ಕಾರ್ಯಕ್ರಮಗಳು, ವರದಿಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಖ್ಯಾತ ನಿರ್ದೇಶಕ ಪಾ ರಂಜಿತ್ ಆವರು ಆರಂಭಿಸಿರುವ ನೀಲಂ ಕಲ್ಚರಲ್ ಸೆಂಟರ್ ನಡೆಸುವ ವೆಬ್ ವಾಹಿನಿ ನೀಲಂ ಸೋಶಿಯಲ್ನಲ್ಲಿ ಆಕೆ ನಡೆಸುತ್ತಿದ್ದ ಮುನ್ನುರೈ ಕಾರ್ಯಕ್ರಮದಿಂದ ಸ್ನೇಹಾ ಜನಪ್ರಿಯತೆ ಪಡೆದಿದ್ದರು.
ತಮಿಳುನಾಡಿನವರಾದ ಸ್ನೇಹಾ ಮುಂಬೈ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಚಿತ್ರನಿರ್ಮಾಣದಲ್ಲಿ ಪದವಿ ಪಡೆದಿದ್ದರು. ಉತ್ತಮ ಅನುವಾದಕಿಯೂ ಆಗಿದ್ದ ಸ್ನೇಹಾ ಕವಿತೆಗಳು ಮತ್ತು ಬ್ಲಾಗ್ ಪೋಸ್ಟ್ಗಳನ್ನು ಕಾರ್ತುಂಬಿ ಎಂಬ ಕಾವ್ಯನಾಮ ಬಳಸಿ ಬರೆಯುತ್ತಿದ್ದರು. ನೀಲಂ ಸೋಶಿಯಲ್ನಲ್ಲಿ ಆಕೆಯ ವಿಡಂಬನಾತ್ಮಕ ಕಾರ್ಯಕ್ರಮ ಎನ್ನಡಾ ಪೊಲಿಟಿಕ್ಸ್ ಪನ್ರಿಂಗ ಕೂಡ ಜನಪ್ರಿಯವಾಗಿತ್ತು.
ತಮ್ಮ ಮಾನಸಿಕ ಆರೋಗ್ಯ ಸಮಸ್ಯೆ, ಪ್ರಮುಖವಾಗಿ ತಾವು ಎದುರಿಸುತ್ತಿದ್ದ ಬಾರ್ಡರ್ಲೈನ್ ಪರ್ಸನಾಲಿಟಿ ಡಿಸಾರ್ಡರ್ (ಬಿಪಿಡಿ) ಬಗ್ಗೆ ಆಕೆ ಯಾವುದೇ ಹಿಂಜರಿಕೆಯಿಲ್ಲದೆ ಮಾತನಾಡುತ್ತಿದ್ದರು.
ಆಕೆ ನಿರ್ದೇಶಿಸಿದ ಕಿರು ಚಿತ್ರ “ಸಾವುಂದು” ಜನವರಿ 2021ರಲ್ಲಿ ನೀಲಂ ಸೋಶಿಯಲ್ ವಾಹಿನಿಯಲ್ಲಿ ಬಿಡುಗಡೆಗೊಂಡಿತ್ತು.







