CJP ನಿಯೋಗದೊಂದಿಗೆ ನಡ್ಡಾ ಮಾತುಕತೆ; ಧರಣಿ ಅಂತ್ಯಗೊಳಿಸುವಂತೆ ಮನವಿ

Photo Credit : x@JPNadda
ಹೊಸದಿಲ್ಲಿ: NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ನಡುವೆ, ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸೋಮವಾರ ಕಾಕ್ರೋಚ್ ಜನತಾ ಪಾರ್ಟಿ (CJP) ನಿಯೋಗದೊಂದಿಗೆ ಮಾತುಕತೆ ನಡೆಸಿದರು.
ಸಭೆಯಲ್ಲಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದ ನಡ್ಡಾ, ಧರಣಿಯನ್ನು ಅಂತ್ಯಗೊಳಿಸಿ ರಾಷ್ಟ್ರ ರಾಜಧಾನಿಯಲ್ಲಿ ಸಾಮಾನ್ಯ ಸ್ಥಿತಿ ಪುನಃಸ್ಥಾಪಿಸಲು ಸರಕಾರದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಪ್ರತಿಭಟನಾಕಾರರ ಪರವಾಗಿ CJP ವಕ್ತಾರ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರು ನಡ್ಡಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣ ರಾಜೀನಾಮೆ ನೀಡುವಂತೆ ಅಥವಾ ಪದಚ್ಯುತಿಗೊಳಿಸುವಂತೆ ತಮ್ಮ ಪ್ರಮುಖ ಬೇಡಿಕೆಯನ್ನು ಅವರು ಪುನರುಚ್ಚರಿಸಿದರು.
ಮಾತುಕತೆ ಬಳಿಕ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ನಡ್ಡಾ, "ಇಂದು ಬೆಳಿಗ್ಗೆ ಮೊದಲ ಬಾರಿಗೆ ಪ್ರತಿಭಟನಾಕಾರರಿಂದ ಸರ್ಕಾರದೊಂದಿಗೆ ಮಾತುಕತೆ ನಡೆಸುವ ಪ್ರಸ್ತಾವ ಬಂದಿತ್ತು. ಬೆಳಿಗ್ಗೆ 11.50ರಿಂದ ಚರ್ಚೆ ಆರಂಭವಾಯಿತು. ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಆರಂಭದಲ್ಲಿ ಮೌಖಿಕವಾಗಿ ಚರ್ಚೆ ನಡೆಸಲಾಗಿದ್ದು, ಸಂಜೆ ಸುಮಾರು 4 ಗಂಟೆಗೆ ಪ್ರತಿಭಟನಾಕಾರರ ನಿಯೋಗ ಲಿಖಿತ ಮನವಿಯನ್ನೂ ಸಲ್ಲಿಸಿತು. ಎಲ್ಲ ಪ್ರತಿಭಟನಾಕಾರರು ಧರಣಿಯನ್ನು ಅಂತ್ಯಗೊಳಿಸಿ ಸಾಮಾನ್ಯ ಸ್ಥಿತಿ ಪುನಃಸ್ಥಾಪಿಸಲು ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.
ಸೌರವ್ ದಾಸ್ ಕೂಡ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, "ನಾನು ಮತ್ತು ಅಶುತೋಷ್ ರಾಂಕಾ ಮಧ್ಯಾಹ್ನ 12 ಗಂಟೆಯಿಂದ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿದ್ದೆವು. ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆ ಅಥವಾ ವಜಾ ಸೇರಿದಂತೆ ನಮ್ಮ ಬೇಡಿಕೆಗಳನ್ನು ತಿಳಿಸಿದ್ದೇವೆ. ಈ ಕುರಿತು ಸೂಕ್ತ ಮಟ್ಟದಲ್ಲಿ ಚರ್ಚಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ" ಎಂದು ಹೇಳಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶುತೋಷ್ ರಾಂಕಾ, ನಿಯೋಗವು ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿರಿಸಿದೆ ಎಂದು ಹೇಳಿದರು.
"ಸೋನಮ್ ವಾಂಗ್ಚುಕ್ ಅವರನ್ನು ತಕ್ಷಣ ಬಿಡುಗಡೆ ಮಾಡಿ, ಅವರು ವೀಡಿಯೊ ಸಂದೇಶದ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ನೀಡಬೇಕು. ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣ ವಜಾಗೊಳಿಸಬೇಕು ಅಥವಾ ಅವರ ರಾಜೀನಾಮೆಯನ್ನು ಅಂಗೀಕರಿಸಬೇಕು. ಅಲ್ಲದೆ, NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು" ಎಂದು ಅವರು PTIಗೆ ತಿಳಿಸಿದ್ದಾರೆ.






