West Bengal SIR ವಿವಾದ | ಚುನಾವಣಾ ಆಯೋಗಕ್ಕಿಂತ ಹೆಚ್ಚಿನ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಿದ್ದ ನ್ಯಾ.ಟಿ.ಎಸ್.ಶಿವಜ್ಞಾನಂ

ಟಿ.ಎಸ್.ಶಿವಜ್ಞಾನಂ | Photo Credit : indianexpress.com
ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ವಿವಾದಾತ್ಮಕ ಎಸ್ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲಾಗಿದ್ದ 1,607 ಜನರ ಮೇಲ್ಮನವಿಗಳನ್ನು ಮೇಲ್ಮನವಿ ನ್ಯಾಯಮಂಡಳಿಗಳು ಪುರಸ್ಕರಿಸಿದ್ದವು ಮತ್ತು ಅವರ ಹೆಸರುಗಳನ್ನು ಪಟ್ಟಿಗೆ ಮರುಸೇರಿಸಿದ್ದವು ಎನ್ನುವುದನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ದತ್ತಾಂಶಗಳು ತೋರಿಸಿವೆ ಎಂದು The Indian Express ವರದಿ ಮಾಡಿದೆ.
ರಾಜ್ಯದಲ್ಲಿ ಮತದಾನ ಮುಗಿಯುವುದಕ್ಕೆ ಒಂದು ದಿನ ಮೊದಲು ಈ ದತ್ತಾಂಶಗಳು ಸುದ್ದಿಸಂಸ್ಥೆಗೆ ಲಭ್ಯವಾಗಿದ್ದವು.
ಆದರೆ ನ್ಯಾಯಮೂರ್ತಿ (ನಿವೃತ್ತ) ಟಿ.ಎಸ್.ಶಿವಜ್ಞಾನಂ ಅವರ ನೇತೃತ್ವದ ನ್ಯಾಯಮಂಡಳಿಯೊಂದೇ ಎ.5ರಿಂದ ಎ.27ರ ನಡುವೆ 1,717 ಮೇಲ್ಮನವಿಗಳನ್ನು ಪುರಸ್ಕರಿಸಿತ್ತು ಎನ್ನುವುದು ಸುದ್ದಿಸಂಸ್ಥೆಗೆ ತಿಳಿದುಬಂದಿದೆ. ಉಳಿದ 18 ನ್ಯಾಯಮಂಡಳಿಗಳು ಎಷ್ಟು ಮೇಲ್ಮನವಿಗಳನ್ನು ಪುರಸ್ಕರಿಸಿದ್ದವು ಮತ್ತು ಮತ ಚಲಾಯಿಸಲು ಇನ್ನೂ ಎಷ್ಟು ಜನರನ್ನು ಸಕಾಲದಲ್ಲಿ ಮತದಾರರ ಪಟ್ಟಿಗಳಿಗೆ ಸೇರಿಸಬಹುದಿತ್ತು ಎಂಬ ಬಗ್ಗೆ ಈಗ ಪ್ರಶ್ನೆಗಳು ಉದ್ಭವಿಸಿವೆ.
ನ್ಯಾ.ಶಿವಜ್ಞಾನಂ ಅವರು ಗುರುವಾರ ನ್ಯಾಯಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ತಾನು ರಾಜೀನಾಮೆಯನ್ನು ಸಲ್ಲಿಸಿರುವುದಾಗಿ ಅವರು ತನ್ನನ್ನು ಸಂಪರ್ಕಿಸಿದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಚುನಾವಣಾ ಆಯೋಗದ ಮಾ.20ರ ಅಧಿಸೂಚನೆಯಂತೆ ನ್ಯಾ.ಶಿವಜ್ಞಾನಂ ಅವರಿಗೆ ಆರಂಭದಲ್ಲಿ ಉತ್ತರ 24 ಪರಗಣಗಳು ಮತ್ತು ಕೋಲ್ಕತಾದಲ್ಲಿನ ಕೆಲವು ಕ್ಷೇತ್ರಗಳನ್ನು ವಹಿಸಲಾಗಿದ್ದು, ಒಟ್ಟು 1,777 ಮೇಲ್ಮನವಿಗಳನ್ನು ಇತ್ಯರ್ಥಗೊಳಿಸಿದ್ದ ಅವರು ಈ ಪೈಕಿ 1,717 ಮೇಲ್ಮನವಿಗಳನ್ನು ಪುರಸ್ಕರಿಸಿದ್ದರು ಎನ್ನಲಾಗಿದೆ. ಕಲಾವಿದ ನಂದಲಾಲ ಬೋಸ್ ಅವರ ಕುಟುಂಬದ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿಗಳನ್ನೂ ಆದ್ಯತೆಯ ಮೇರೆಗೆ ವಿಚಾರಣೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದ ಬಳಿಕ ಬೀರಭೂಮ್ ಜಿಲ್ಲೆಯನ್ನೂ ಅವರಿಗೆ ವಹಿಸಲಾಗಿತ್ತು. ಬೀರಭೂಮ್ ಜಿಲ್ಲೆಯಲ್ಲಿ ಸೇರ್ಪಡೆಗಳ ವಿರುದ್ಧ ಚುನಾವಣಾ ಆಯೋಗವು ಸಲ್ಲಿಸಿದ್ದ 60 ಮೇಲ್ಮನವಿಗಳನ್ನು ಅವರು ತಿರಸ್ಕರಿಸಿದ್ದರು.
ಫರಕ್ಕಾ ಕ್ಷೇತ್ರದಿಂದ ಚುನಾವಣೆಯನ್ನು ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಮೊತಾಬ್ ಶೇಖ್ ಅವರು ತನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನೂ ಪುರಸ್ಕರಿಸಿದ್ದ ನ್ಯಾ.ಶಿವಜ್ಞಾನಂ,ಅವರ ಹೆಸರನ್ನು ಪಟ್ಟಿಗೆ ಮರುಸೇರಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದ್ದರು.
ಅಭೂತಪೂರ್ವ ಕ್ರಮವೊಂದರಲ್ಲಿ ಫೆಬ್ರವರಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯೋಗ ಮತ್ತು ರಾಜ್ಯ ಸರಕಾರದ ನಡುವೆ ವಿಶ್ವಾಸದ ಕೊರತೆಯನ್ನು ಗಮನಿಸಿ ಬಂಗಾಳದಲ್ಲಿ ಮತದಾರರ ಮೇಲ್ಮನವಿಗಳನ್ನು ನಿರ್ಧರಿಸುವ ಹೊಣೆಯನ್ನು ನ್ಯಾಯಾಂಗ ಅಧಿಕಾರಿಗಳಿಗೆ ವಹಿಸಿತ್ತು.






