ಕಲಬುರಗಿ |ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ : ಕೆ.ನೀಲಾ

ಕಲಬುರಗಿ: ಧರ್ಮಸ್ಥಳದಲ್ಲಿ 1986ರಿಂದ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಕೊಲೆ, ಅತ್ಯಾಚಾರ, ಅಸಹಜ ಸಾವುಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಆಗ್ರಹಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆ.ನೀಲಾ, ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದಿರುವ ಎಲ್ಲಾ ಭೂಕಬಳಿಕೆ ಕುರಿತು ಸಮಗ್ರ ತನಿಖೆ ನಡೆಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಹೆಸರಿನಲ್ಲಿ ನಡೆದಿರುವ ಕಿರುಕುಳ, ದೌರ್ಜನ್ಯ ಮತ್ತು ಆತ್ಮಹತ್ಯೆಗಳ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ, ಸೌಜನ್ಯ ಸೇರಿದಂತೆ ಇತರೆ ಆಗಸಹಜ ಸಾವು, ನಾಪತ್ತೆ ಮತ್ತಿತರ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕು. ಎಸ್ಐಟಿ ತಂಡ ಸಧ್ಯ ನಡೆಯುತ್ತಿರುವ ತನಿಖೆಯ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಗಳನ್ನು ಬಹಿರಂಗಪಡಿಸದಿದ್ದರೂ ಕೆಲವು ಮಾಧ್ಯಮಗಳಲ್ಲಿ ವಿವಿಧ ಚರ್ಚೆ ನಡೆಯುತ್ತಿರುವುದು ಕಂಡರೆ ಪ್ರಕರಣವನ್ನು ದಾರಿ ತಪ್ಪಿಸಲಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಪ್ರಕರಣದ ಹಿಂದೆ ಕಮ್ಯುನಿಸ್ಟ್ ಪಕ್ಷದ ಯಾವುದೇ ಪಾತ್ರವಾಗಲಿ, ಷಡ್ಯಂತ್ರವಾಗಲಿ ಇಲ್ಲ. ಕಮ್ಯೂನಿಸ್ಟರು 1986ರಿಂದಲೂ ಈಗಲೂ ಹೋರಾಡುತ್ತಿದ್ದಾರೆ, ನಮ್ಮ ಹೋರಾಟದಿಂದ ತನಿಖಾ ತಂಡ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಧರ್ಮಸ್ಥಳ ಒಂದು ಗ್ರಾಮ. ಧರ್ಮಸ್ಥಳ ಎಂಬ ದೇವಸ್ಥಾನದ ಪಾವಿತ್ರ್ಯತೆ ವಿರುದ್ಧ ಸರಕಾರದ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರು ಹೇಳಿಕೆ ನೀಡಬಾರದು. ಆಡಳಿತ ಪಕ್ಷದ ನಾಯಕರು ಹಾಗೂ ಬಿಜೆಪಿಗರು ಸೇರಿಕೊಂಡು ಧರ್ಮದ ಮೇಲೆ ದಾಳಿ ನಡೆಯುತ್ತಿದೆ ಎನ್ನುವ ಹೇಳಿಕೆ ನೀಡುತ್ತಾ, ಎಸ್ಐಟಿ ತನಿಖಾ ತಂಡದ ದಿಕ್ಕನ್ನು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ನೇರವಾಗಿ ವೀರೇಂದ್ರ ಹೆಗ್ಗಡೆ ಅವರ ಕಾಲಿಗೆ ಬೀಳುತ್ತಿದ್ದಾರೆ, ಅವರು ಜನರ ಪರವಾಗಿ ಇರುವುದಾಗಿ ಹೇಳುತ್ತಿಲ್ಲ. ಬದಲಾಗಿ ಯಾರು ಅತ್ಯಾಚಾರ, ಅಸಹಜ ಸಾವು, ಭೂಕಬಳಿಕೆಯ ಪ್ರಕರಣಗಳ ಆರೋಪಿಗಳಿದ್ದಾರೋ ಅವರ ಪರವಾಗಿ ನಿಂತು ಬೆಂಬಲ ನೀಡುತ್ತಿದ್ದಾರೆ. ನ್ಯಾಯದ ಪರವಾಗಿ ಹೋರಾಡಬೇಕಿದ್ದ ಬಿಜೆಪಿ ಪಕ್ಷದವರು ಆರೋಪಿಗಳ ಪರ ನಿಲ್ಲುತ್ತಿರುವುದು ಖಂಡನೀಯ ಎಂದರು.
ಧರ್ಮಸ್ಥಳದಲ್ಲಿ ನಡೆದ ಕೊಲೆ, ಅತ್ಯಾಚಾರ, ಅಪಹರಣ ಪ್ರಕರಣ, ದೊಡ್ಡ ಪ್ರಮಾಣದ ಭೂಕಬಳಿಕೆ ಪ್ರಕರಣ ಹಾಗೂ ಧರ್ಮಸ್ಥಳ ಸಂಸ್ಥೆಯ ಕಿರುಕುಳ ಪ್ರಕರಣದ ಕುರಿತು ಎಸ್‌ಐಟಿಯಿಂದ ತನಿಖೆ ಸಾಧ್ಯವಾಗದಿದ್ದರೆ, ಮತ್ತೊಂದು ಎಸ್‌ಐಟಿ ರಚಿಸಿ ಸಮಗ್ರ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಮೂರು ಪ್ರಕರಣಗಳ ಕುರಿತು ಹೋರಾಟ ರೂಪಿಸಲು ನಗರದಲ್ಲಿ ಒಂದು ವಾರದಲ್ಲಿ ದುಂಡುಮೇಜಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸುಧಾಮ ಧನ್ನಿ, ಶಾಂತಾ ಘಂಟೆ ಉಪಸ್ಥಿತರಿದ್ದರು.







