ಮಹಾರಾಷ್ಟ್ರ | ಹಂಗಾಮಿ ವಿಧಾನಸಭಾ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಜೆಪಿ ಶಾಸಕ ಕಾಳಿದಾಸ್ ಕೊಲಂಬ್ಕರ್

ಬಿಜೆಪಿ ಶಾಸಕ ಕಾಳಿದಾಸ್ ಕೊಲಂಬ್ಕರ್ (Photo: X/@KalidasKolambkr)
ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಮೂರು ದಿನಗಳ ವಿಶೇಷ ಅಧಿವೇಶನ ಪ್ರಾರಂಭಗೊಳ್ಳುವುದಕ್ಕೂ ಮುನ್ನಾ ದಿನವಾದ ಶುಕ್ರವಾರದಂದು ಬಿಜೆಪಿ ಶಾಸಕ ಕಾಳಿದಾಸ್ ಕೊಲಂಬ್ಕರ್ ಹಂಗಾಮಿ ವಿಧಾನಸಭಾ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ರಾಜಭವನದಲ್ಲಿ ಹಂಗಾಮಿ ವಿಧಾನಸಭಾ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದು ಕೊಲಂಬ್ಕರ್ PTI ಸುದ್ದಿ ಸಂಸ್ಥೆಗೆ ದೃಢಪಡಿಸಿದ್ದಾರೆ. ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಪ್ರಮಾಣ ವಚನ ಬೋಧಿಸಲಿದ್ದಾರೆ.
ಕಾಳಿದಾಸ್ ಕೊಲಂಬ್ಕರ್ ಸದ್ಯ ಮುಂಬೈನ ವಡಾಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕಾಳಿದಾಸ್ ಕೊಲಂಬ್ಕರ್ ಹಂಗಾಮಿ ಸ್ಪೀಕರ್ ಆಗಿ ನೂತನವಾಗಿ ಚುನಾಯಿತರಾಗಿರುವ 288 ಶಾಸಕರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಡಿಸೆಂಬರ್ 7ರಿಂದ ಪ್ರಾರಂಭಗೊಳ್ಳಲಿರುವ 15ನೇ ವಿಧಾನಭೆಯ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ವಿಧಾನಸಭಾ ಸ್ಪೀಕರ್ ಚುನಾವಣೆಯೂ ಅವರ ನೇತೃತ್ವದಲ್ಲಿ ನಡೆಯಲಿದೆ.
ಡಿಸೆಂಬರ್ 9ರಂದು ವಿಧಾನಸಭಾ ಸ್ಪೀಕರ್ ಚುನಾವಣೆ ನಡೆಯಲಿದ್ದು, ಇದಾದ ನಂತರ, ದೇವೇಂದ್ರ ಫಡ್ನವಿಸ್ ನೇತೃತ್ವದ ಮಹಾಯುತಿ ಸರಕಾರ ವಿಶ್ವಾಸಮತ ಯಾಚಿಸಲಿದೆ.







