ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ : ಪ್ರಕರಣ ದಾಖಲು

ನಟ ಕಪಿಲ್ ಶರ್ಮಾ, ನಟ ರಾಜ್ ಪಾಲ್ ಯಾದವ್, ಗಾಯಕಿ ಸುಗಂಧ ಮಿಶ್ರಾ ಮತ್ತು ನೃತ್ಯ ನಿರ್ದೇಶಕ ರೆಮೋ ಡಿಸೋಜಾ :Photo | NDTV
ಹೊಸದಿಲ್ಲಿ : ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಇಮೇಲ್ ಮೂಲಕ ಜೀವ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದ್ದು, ಈ ಕುರಿತು ಮುಂಬೈ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹಾಸ್ಯ ನಟ ಕಪಿಲ್ ಶರ್ಮಾ, ನಟ ರಾಜ್ ಪಾಲ್ ಯಾದವ್, ಗಾಯಕಿ ಸುಗಂಧ ಮಿಶ್ರಾ ಮತ್ತು ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಅವರಿಗೆ ಬೆದರಿಕೆ ಸಂದೇಶ ಬಂದಿದ್ದು, ಈ ಕುರಿತು ಅಪರಿಚಿತ ವ್ಯಕ್ತಿಯ ವಿರುದ್ಧ ಬಿಎನ್ ಎಸ್ ನ ಸೆಕ್ಷನ್ 351(3) ಅಡಿಯಲ್ಲಿ ಮಹಾರಾಷ್ಟ್ರದ ಅಂಬೋಲಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
́ನಾವು ನಿಮ್ಮ ಇತ್ತೀಚಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ, ಇದು ಪ್ರಚಾರಕ್ಕಾಗಿ ಅಥವಾ ನಿಮಗೆ ಕಿರುಕುಳ ನೀಡುವ ಪ್ರಯತ್ನವಲ್ಲ, ಈ ಸಂದೇಶವನ್ನು ಅತ್ಯಂತ ಗಂಭೀರತೆ ಮತ್ತು ಗೌಪ್ಯತೆಯಿಂದ ಪರಿಗಣಿಸಲು ನಾವು ನಿಮ್ಮನ್ನು ಒತ್ತಾಯಿಸುತ್ತೇವೆʼ ಎಂದು ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಬೆದರಿಕೆ ಇಮೇಲ್ ಕಳುಹಿಸಿದವರು ಬಿಷ್ಣು ಎಂದು ಸಹಿ ಮಾಡಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ಸುಗಂಧ ಮಿಶ್ರಾ ಮತ್ತು ರೆಮೋ ಡಿಸೋಜಾ ಕೂಡ ಇದೇ ರೀತಿಯ ಇಮೇಲ್ ಸಂದೇಶ ಬಂದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಡಿಸೆಂಬರ್ 14ರಂದು ರಾಜ್ ಪಾಲ್ ಯಾದವ್ ಅವರಿಗೆ ಇಮೇಲ್ ಮೂಲಕ ಜೀವ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಅವರು ಡಿಸೆಂಬರ್ 17ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಒಬ್ಬರ ಹಿಂದೆ ಒಬ್ಬರಂತೆ ಸೆಲೆಬ್ರಿಟಿಗಳಿಗೆ ಬೆದರಿಕೆ ಕರೆ ಬರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆಯನ್ನು ನಡೆಸುತ್ತಿದ್ದಾರೆ.







