ಕರೂರು ಕಾಲ್ತುಳಿತ ಪ್ರಕರಣ | ಟಿವಿಕೆ ಮುಖ್ಯಸ್ಥ ವಿಜಯ್ಗೆ ಸಿಬಿಐ ಸಮನ್ಸ್

ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ | Photo Credit : PTI
ಹೊಸದಿಲ್ಲಿ, ಮಾ. 9: ಕರೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಹೊಸ ಸುತ್ತಿನ ವಿಚಾರಣೆಗೆ ಮಂಗಳವಾರ ಹಾಜರಾಗುವಂತೆ ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಅವರಿಗೆ ಸಿಬಿಐ ಸಮನ್ಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿ 12 ಹಾಗೂ 19ರಂದು ವಿಜಯ್ ಅವರನ್ನು ಸಿಬಿಐಯ ಮುಖ್ಯ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ಸಂದರ್ಭ ಸಿಬಿಐ ಮುಂದಿನ ವಿಚಾರಣೆಗೆ ಅಗತ್ಯವಿರುವ ವಿಷಯಗಳನ್ನು ಸಂಗ್ರಹಿಸಿತು ಹಾಗೂ ಹೆಚ್ಚಿನ ಸ್ಪಷ್ಟನೆಯನ್ನು ವಿಜಯ್ ಅವರಿಂದ ಪಡೆದುಕೊಂಡಿತು.
ಅವರಿಗೆ ಈಗ ಹೊಸ ನೋಟಿಸ್ ನೀಡಲಾಗಿದೆ. ತಮಿಳುನಾಡಿನ ಕರೂರಿನಲ್ಲಿ 2025 ಸೆಪ್ಟಂಬರ್ 27ರಂದು ನಡೆದ ವಿಜಯ್ ಅವರ ರ್ಯಾಲಿಯ ಸಂದರ್ಭ ಸಂಭವಿಸಿದ ಕಾಲ್ತುಳಿದಲ್ಲಿ 41 ಮಂದಿ ಮೃತಪಟ್ಟಿದ್ದರು ಹಾಗೂ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸುತ್ತಿತ್ತು. ಸುಪ್ರೀಂ ಕೋರ್ಟ್ನ ಆದೇಶದ ಬಳಿಕ ಈ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ.





