ಪ್ರಥಮ ಎಂಬಿಬಿಎಸ್ ವಿದ್ಯಾರ್ಥಿಯನ್ನು ಸ್ವಾಗತಿಸಿದ ಕಾಸರಗೋಡು ವೈದ್ಯಕೀಯ ಕಾಲೇಜು

PC :onmanorama.com
ಕಾಸರಗೋಡು: ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ ಅನುಮೋದನೆ ಪಡೆದ ನಂತರ, ಕಾಸರಗೋಡಿನ ಸರಕಾರಿ ವೈದ್ಯಕೀಯ ಕಾಲೇಜು ಸೋಮವಾರ ತನ್ನ ಮೊದಲ ಎಂಬಿಬಿಎಸ್ ವಿದ್ಯಾರ್ಥಿಯನ್ನು ಕಾಲೇಜಿಗೆ ದಾಖಲಿಸಿಕೊಂಡಿತು. ಇದು ಈ ಕಾಲೇಜಿನ ಉದ್ಘಾಟನಾ ಬ್ಯಾಚ್ ಆಗಿದೆ.
ಅಖಿಲ ಭಾರತೀಯ ವೈದ್ಯಕೀಯ ಪ್ರವೇಶ ಕೋಟಾದಲ್ಲಿ ಎಂಬಿಬಿಎಸ್ ಸೀಟ್ ಗೆ ಅರ್ಹತೆ ಪಡೆದಿರುವ ಗುರ್ವಿಂದರ್ ಸಿಂಗ್, ರಾಜಸ್ಥಾನದ ಅಲ್ವಾರ್ ನಿವಾಸಿಯಾಗಿದ್ದಾರೆ. ಮೊದಲ ಬ್ಯಾಚ್ ನ 50 ವಿದ್ಯಾರ್ಥಿಗಳ ಪೈಕಿ ಏಳು ಸೀಟುಗಳನ್ನು ಅಖಿಲ ಭಾರತೀಯ ಪ್ರವೇಶ ಶ್ರೇಯಾಂಕ ಪಟ್ಟಿಗೆ ಮೀಸಲಿಡಲಾಗಿದೆ. ಈ ಕ್ಷಣವನ್ನು ಸ್ಮರಣಾರ್ಹವಾಗಿಸಲು ಕಾಲೇಜಿನ ಉಸ್ತುವಾರಿ ಪ್ರಾಂಶುಪಾಲ ಡಾ. ಕೆ.ಕೆ.ಸಂತೋಷ್, ವೈದ್ಯಕೀಯ ಅಧೀಕ್ಷಕ ಪ್ರವೀಣ್, ಗುರ್ವಿಂದರ್ ಸಿಂಗ್ ಗೆ ಸಿಹಿ ತಿನ್ನಿಸುವ ಮೂಲಕ ಕಾಲೇಜಿಗೆ ಸ್ವಾಗತಿಸಿದರು. ಅವರ ಹಾಜರಾತಿಯೊಂದಿಗೆ ಅವರನ್ನು ಕಾಲೇಜಿಗೆ ದಾಖಲಿಸಿಕೊಳ್ಳುವ ವಿಧಾನವನ್ನು ಔಪಚಾರಿಕವಾಗಿ ಸಂಪೂರ್ಣಗೊಳಿಸಲಾಯಿತು.
ಕೇರಳ ರಾಜ್ಯದ ಇನ್ನುಳಿದ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ಸುತ್ತಿನ ಸಮಾಲೋಚನೆಯ ನಂತರ ವಿದ್ಯಾರ್ಥಿಗಳು ದಾಖಲಾದ ನಂತರ, ಈ ವಾರದ ಆರಂಭದಿಂದ ತರಗತಿಗಳು ಪ್ರಾರಂಭಗೊಂಡಿವೆ. ಆದರೆ, ಈ ಸುತ್ತು ಮುಕ್ತಾಯಗೊಂಡ ನಂತರವಷ್ಟೇ ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿಗೆ ಅನುಮೋದನೆ ದೊರೆತಿದ್ದು, ಹೀಗಾಗಿ ಆರಂಭದಲ್ಲಿ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ.





