ಕಾಶ್ಮೀರ: ರಜೆ ಮೇಲೆ ಮನೆಗೆ ಬಂದಿದ್ದ ಸೈನಿಕ ನಾಪತ್ತೆ, ಕಾರಿನಲ್ಲಿ ರಕ್ತದ ಕಲೆ ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ರಜೆಯ ಮೇಲೆ ಮನೆಗೆ ಬಂದಿದ್ದ 25 ವರ್ಷದ ಯೋಧನನ್ನು ಆತನ ವಾಹನದಿಂದ ಅಪಹರಿಸಲಾಗಿದೆ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಯೋಧ ಜಾವೇದ್ ಅಹ್ಮದ್ ವಾನಿ ಕುಲ್ಗಾಮ್ ಜಿಲ್ಲೆಯ ಅಚಾತಲ್ ಪ್ರದೇಶದ ನಿವಾಸಿಯಾಗಿದ್ದಾರೆ. ರೈಫಲ್ ಮ್ಯಾನ್ ಜಾವೇದ್ ಅಹ್ಮದ್ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಗೆ ಸೇರಿದ್ದು, ಕೆಲವು ದಿನಗಳ ಹಿಂದೆ ರಜೆಯ ಮೇಲೆ ಮನೆಗೆ ಬಂದಿದ್ದರು.
ಜಾವೇದ್ ಅಹ್ಮದ್ ವಾನಿ ಅವರನ್ನು ಲೇಹ್ (ಲಡಾಖ್) ನಲ್ಲಿ ನಿಯೋಜಿಸಲಾಗಿತ್ತು ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನಿನ್ನೆ ಸಂಜೆ ಪರಾನ್ ಹಾಲ್ ನಲ್ಲಿ ಅವರ ಕಾರು ಪತ್ತೆಯಾಗಿದೆ ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಅಪಹರಣಕ್ಕೊಳಗಾದ ಯೋಧನ ಪತ್ತೆಗೆ ಭಾರತೀಯ ಸೇನೆ ಹಾಗೂ ಪೊಲೀಸರು ಭಾರೀ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಪ್ರದೇಶವನ್ನು ಸುತ್ತುವರಿಯಲಾಗಿದೆ.
ಜಾವೇದ್ ನಿನ್ನೆ ಸಂಜೆ 6.30ರ ಸುಮಾರಿಗೆ ಅವರು ಮಾರುಕಟ್ಟೆಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಆಲ್ಟೋ ಕಾರಿನಲ್ಲಿ ಹೋಗಿದ್ದರು. ರಾತ್ರಿ 9 ಗಂಟೆಯಾದರೂ ವಾಪಸ್ ಬಾರದೇ ಇದ್ದಾಗ ಕುಟುಂಬದವರು ಹುಡುಕಾಡಿದ್ದಾರೆ
ಅವರು ಮನೆಗೆ ವಾಪಸಾಗದ ಹಿನ್ನಲೆಯಲ್ಲಿ ಅವರ ಕುಟುಂಬ ಸದಸ್ಯರು ಹತ್ತಿರದ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರನ್ನು ಹುಡುಕಲು ಆರಂಭಿಸಿದರು. ಶೋಧ ಕಾರ್ಯದ ವೇಳೆ ಪರಾನ್ ಹಾಲ್ ಗ್ರಾಮದಲ್ಲಿ ಜಾವೇದ್ ನ ಕಾರಿನಲ್ಲಿ ಚಪ್ಪಲಿ ಮತ್ತು ರಕ್ತದ ಕಲೆಗಳು ಪತ್ತೆಯಾಗಿವೆ. ವಾಹನವನ್ನು ಅನ್ ಲಾಕ್ ಮಾಡಲಾಗಿದೆ.
ಯೋಧನ ಕುಟುಂಬ ಸದಸ್ಯರು ಆತನನ್ನು ಉಗ್ರರು ಅಪಹರಿಸಿದ್ದಾರೆ ಎಂದು ಶಂಕಿಸಿದ್ದು, ಆತನನ್ನು ಬಿಡುಗಡೆ ಮಾಡುವಂತೆ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
"ದಯವಿಟ್ಟು ನನ್ನ ಮಗ ಜಾವೇದ್ ನನ್ನು ಬಿಡುಗಡೆ ಮಾಡಿ. ನಾನು ಅವನನ್ನು ಸೈನ್ಯದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ, ಆದರೆ ದಯವಿಟ್ಟು ಅವನನ್ನು ಬಿಡುಗಡೆ ಮಾಡಿ" ಎಂದು ಯೋಧನ ದುಃಖತಪ್ತ ತಾಯಿ ವಿನಂತಿಸಿದ್ದಾರೆ







