ಹರ್ಯಾಣ | ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತ ಆರೋಪಿಯನ್ನು ಫರೀದಾಬಾದ್ ಜೈಲಿನಲ್ಲಿ ಹತ್ಯೆ

Photo| timesofindia
ಫರೀದಾಬಾದ್: ಅಯೋಧ್ಯೆಯಲ್ಲಿನ ರಾಮಮಂದಿರದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತ ಆರೋಪಿಯನ್ನು ಫರೀದಾಬಾದ್ ಜಿಲ್ಲಾ ಕಾರಾಗೃಹದಲ್ಲಿ ಇರಿದು ಹತ್ಯೆಗೈದಿರುವ ಘಟನೆ ರವಿವಾರ ರಾತ್ರಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬ್ದುಲ್ ರಹ್ಮಾನ್(20) ಹತ್ಯೆಯಾದ ಕೈದಿ. ಅದೇ ಜೈಲಿನಲ್ಲಿದ್ದ ಕಾಶ್ಮೀರದ ಸಹ ಖೈದಿ ಅರುಣ್ ಚೌಧರಿ ಕೃತ್ಯವನ್ನು ಎಸಗಿದ್ದಾನೆ ಎಂದು ಹೇಳಲಾಗಿದೆ.
ಅರುಣ್ ಚೌಧರಿ ಚೂಪಾದ ಆಯುಧದಿಂದ ರಹ್ಮಾನ್ ತಲೆಗೆ ಹೊಡೆದಿದ್ದು, ಇದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆತ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಈ ದಾಳಿಗೆ ಕಾರಣವಾದ ಸನ್ನಿವೇಶಗಳ ಕುರಿತು ಪರಿಶೀಲನೆ ನಡೆಸಲು ಪೊಲೀಸರು ಸಹ ಖೈದಿಗಳು ಹಾಗೂ ಜೈಲು ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ.
ಉತ್ತರ ಪ್ರದೇಶದ ಫೈಝಾಬಾದ್ ಜಿಲ್ಲೆಯ ಮಿಕಿಪುರ್ ಗ್ರಾಮದ ನಿವಾಸಿಯಾದ ಅಬ್ದುಲ್ ರಹ್ಮಾನ್ ನನ್ನು 2025ರ ಮಾರ್ಚ್ 2ರಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮತ್ತು ಹರ್ಯಾಣ ಪೊಲೀಸರ ವಿಶೇಷ ಕಾರ್ಯಪಡೆ ಪಾಲಿ ಗ್ರಾಮದಲ್ಲಿ ಬಂಧಿಸಿತ್ತು.





