ಕೇರಳಂ ವಿದ್ಯಾರ್ಥಿನಿ ಕಾಝಿಯಾ ಲಿಝ್ ಮೆಜೊಗೆ ಮಿಸ್ ಯೂನಿವರ್ಸ್ ಇಂಡಿಯಾ 2026 ಕಿರೀಟ

ಕಾಝಿಯಾ ಲಿಝ್ ಮೆಜೊ | Photo Credit : X
ಹೊಸದಿಲ್ಲಿ: ಕೇರಳಂ ಮೂಲದ ಕಾನೂನು ವಿದ್ಯಾರ್ಥಿನಿ ಕಾಝಿಯಾ ಲಿಝ್ ಮೆಜೊ (19) 2026ರ ‘ಮಿಸ್ ಯೂನಿವರ್ಸ್ ಇಂಡಿಯಾ’ ಆಗಿ ಹೊರಹೊಮ್ಮಿದ್ದಾರೆ. ಕಜಿಯಾ ಜೈಪುರದಲ್ಲಿ ರವಿವಾರ ನಡೆದ ಸೌಂದರ್ಯ ಸ್ಪರ್ಧೆಯ ಫೈನಲ್ನಲ್ಲಿ ಇತರ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಈ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಅವರು ನವೆಂಬರ್ನಲ್ಲಿ ಪೋರ್ಟೊ ರಿಕೋದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್(ಭುವನ ಸುಂದರಿ) ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮೊದಲ ರನ್ನರ್ ಅಪ್ ತಮಿಳುನಾಡಿನ ವೈಷ್ಣವಿ ಗಣೇಶ್ ಮತ್ತು ಎರಡನೇ ರನ್ನರ್ ಅಪ್ ಗುಜರಾತ್ನ ಅನುಶ್ರೀ ಸತಾವ್ಲೆಕರ್ ‘ಮಿಸ್ ಇಂಟರ್ನ್ಯಾಷನಲ್ ಇಂಡಿಯಾ 2026’ ಕಿರೀಟವನ್ನು ಗೆದ್ದುಕೊಂಡರು.
ಕಾಝಿಯಾ ಲಿಝ್ ಮೆಜೊ ಕೇರಳದ ಮಾವೇಲಿಕ್ಕರ ಮೂಲದ ಕಾನೂನು ವಿದ್ಯಾರ್ಥಿನಿ ಮತ್ತು ಮಾಡೆಲ್. ರಾಷ್ಟ್ರೀಯ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ಗೆಲ್ಲುವ ಮೂಲಕ ಅವರು ಸುದ್ದಿಯಲ್ಲಿದ್ದರೂ, ಇದು ಅವರಿಗೆ ಮೊದಲ ಸೌಂದರ್ಯ ಸ್ಪರ್ಧೆಯ ಕಿರೀಟವೇನೂ ಅಲ್ಲ.
ಸುದ್ದಿಸಂಸ್ಥೆಯ ವರದಿಯ ಪ್ರಕಾರ, ಅವರು 17ನೇ ವಯಸ್ಸಿನಲ್ಲಿ ‘ಮಿಸ್ ಟೀನ್ ದಿವಾ 2024’ ಪ್ರಶಸ್ತಿಯನ್ನು ಗೆದ್ದಿದ್ದರು. ನಂತರ 2025ರ ‘ಮಿಸ್ ಟೀನ್ ಇಂಟರ್ನ್ಯಾಷನಲ್’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಈ ವರ್ಷದ ಆರಂಭದಲ್ಲಿ ಅವರು ’ಮಿಸ್ ಯೂನಿವರ್ಸ್ ಕೇರಳ 2026’ ಕಿರೀಟವನ್ನು ಗೆಲ್ಲುವ ಮೂಲಕ ಅತ್ಯಂತ ಕಿರಿಯ ವಯಸ್ಸಿನ ರಾಜ್ಯಮಟ್ಟದ ಪ್ರಶಸ್ತಿ ವಿಜೇತರಾಗಿದ್ದರು.
ತನ್ನ ಇತ್ತೀಚಿನ ಗೆಲುವಿನೊಂದಿಗೆ ಕಜಿಯಾ ಮಿಸ್ ಯುನಿವರ್ಸ್ ಇಂಡಿಯಾ ಪ್ರಶಸ್ತಿ ಗೆದ್ದ ಮೊದಲ ಕೇರಳೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.






