ಜಾರ್ಖಂಡ್ ವಿದ್ಯಾರ್ಥಿಗಳ ಪ್ರತಿಭಟನೆಗೆ ಅರವಿಂದ್ ಕೇಜ್ರಿವಾಲ್ ಬೆಂಬಲ

ಅರವಿಂದ್ ಕೇಜ್ರಿವಾಲ್ | Photo Credit : PTI
ಹೊಸದಿಲ್ಲಿ: ಜಾರ್ಖಂಡ್ನಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.
‘‘ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ’’ ಎಂದು ಕೇಜ್ರಿವಾಲ್ ‘ಎಕ್ಸ್’ನ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘‘ಜಾರ್ಖಂಡ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಬೇಡಿಕೆಗಳನ್ನು ನಾನು ಬೆಂಬಲಿಸುತ್ತೇನೆ. ಅವರ ಸಮಸ್ಯೆಗಳನ್ನು ತತ್ಕ್ಷಣವೇ ಪರಿಹರಿಸುವಂತೆ ಸರಕಾರಕ್ಕೆ ಮನವಿ ಮಾಡುತ್ತೇನೆ’’ ಎಂದು ಅವರು ಹೇಳಿದ್ದಾರೆ.
ಜಾರ್ಖಂಡ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿದ್ದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಖಂಡಿಸಿದ್ದಾರೆ. ಇಂತಹ ಕ್ರಮ ತಪ್ಪು ಎಂದು ಅವರು ಹೇಳಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳ ಕಳವಳಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಜಾರ್ಖಂಡ್ನ ಹೇಮಂತ್ ಸೊರೇನ್ ಸರಕಾರದ ಭಾಗವಾಗಿದೆ.
ನೇಮಕಾತಿ ಪರೀಕ್ಷೆಯ ಅಕ್ರಮಗಳನ್ನು ವಿರೋಧಿಸಿ ಬ್ಯಾರಿಕೇಡ್ಗಳನ್ನು ಮುರಿದು ವಿಧಾನ ಸಭೆಗೆ ಮುತ್ತಿಗೆ ಹಾಕಲು ಉದ್ಯೋಗ ಆಕಾಂಕ್ಷಿಗಳು ಪ್ರಯತ್ನಿಸಿದಾಗ ರಾಂಚಿ ಪೊಲೀಸರು ಜಲಫಿರಂಗಿ, ಅಶ್ರವಾಯು ಪ್ರಯೋಗ ಮತ್ತು ಲಾಠಿ ಪ್ರಹಾರ ನಡೆಸಿದ ನಂತರ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್ಸಿ) ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗ (ಜೆಎಸ್ಎಸ್ಸಿ) ಕಾರ್ಯ ನಿರ್ವಹಣೆಯಲ್ಲಿ ಸಮಗ್ರ ಸುಧಾರಣೆಗಳನ್ನು ತರಬೇಕು ಹಾಗೂ ಹಲವು ನೇಮಕಾತಿಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಜುಲೈ 25ರಿಂದ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಸೋಮವಾರ ಮತ್ತಷ್ಟು ತೀವ್ರಗೊಂಡಿದ್ದು, ಜಾರ್ಖಂಡ್ ವಿಧಾನ ಸಭೆ ಮೆರವಣಿಗೆಯನ್ನು ತಡೆಯಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಲಾಠಿ ಪ್ರಹಾರ ನಡೆಸಿದ್ದಾರೆ.






