ಪುರುಷ ಮೃತದೇಹಗಳ ಬಗ್ಗೆ ವಿವಾದಾತ್ಮಕ ಹೇಳಿಕೆ: MBBS ವಿದ್ಯಾರ್ಥಿನಿ ಸೇಜಲ್ ಪವಾರ್ ವಿರುದ್ಧ KEM ಆಸ್ಪತ್ರೆಯಿಂದ ತನಿಖೆ

ಸೇಜಲ್ ಪವಾರ್(X) , ಪ್ರಣಿತ್ ಮೋರ್ (Pranit More \ facebook)
ಮುಂಬೈ: ಇಲ್ಲಿನ KEM ಆಸ್ಪತ್ರೆಯಲ್ಲಿ MBBS ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸೇಜಲ್ ಪವಾರ್ ಅವರು ಕಾಮಿಡಿಯನ್ ಪ್ರಣಿತ್ ಮೋರ್ ಅವರ ಕಾರ್ಯಕ್ರಮದಲ್ಲಿ ಪುರುಷ ಮೃತದೇಹಗಳ ಜನನಾಂಗಗಳ ಗಾತ್ರದ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಆಸ್ಪತ್ರೆಯ ಆಡಳಿತ ಆಂತರಿಕ ತನಿಖೆಗೆ ಆದೇಶಿಸಿದೆ.
ಕಾರ್ಯಕ್ರಮದ ವೇಳೆ ಸೇಜಲ್ ನೀಡಿದ ಹೇಳಿಕೆಗಳ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವೈದ್ಯಕೀಯ ವಲಯ ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ದಾನ ಮಾಡಲಾಗುವ ಮೃತದೇಹಗಳ ಬಗ್ಗೆ ಅವಮಾನಕಾರಿಯಾಗಿ ಮಾತನಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಲಿಖಿತ ಕ್ಷಮೆಯಾಚನೆ:
ವಿವಾದದ ಬಳಿಕ ಸೇಜಲ್ ಪವಾರ್ ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ ಎಂದು India Today ವರದಿ ಮಾಡಿದೆ. ಆದರೂ, ಸಾರ್ವಜನಿಕ ವೇದಿಕೆಯಲ್ಲಿ ಅವರು ಮಾಡಿದ ಹೇಳಿಕೆಗಳು ಹಿರಿಯ ವೈದ್ಯರಲ್ಲಿ ಅಸಮಾಧಾನ ಉಂಟುಮಾಡಿವೆ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ಶಿಕ್ಷಣಕ್ಕಾಗಿ ದಾನವಾಗುವ ಮೃತದೇಹಗಳನ್ನು ಅತ್ಯಂತ ಗೌರವದಿಂದ ಪರಿಗಣಿಸಲಾಗುತ್ತದೆ ಮತ್ತು ಅಂತಹ ವಿಷಯಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆಂತರಿಕ ತನಿಖೆ ಆರಂಭ:
ಸೇಜಲ್ ಭಾಗವಹಿಸಿದ್ದ ಒಂದು ಗಂಟೆಯ ಕಾರ್ಯಕ್ರಮದ ಸಂಪೂರ್ಣ ವೀಡಿಯೋವನ್ನು ಪರಿಶೀಲಿಸಲಾಗುತ್ತಿದ್ದು, ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಿಗ್ಗೆ ಆಂತರಿಕ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದು ಕೇವಲ ಎರಡು ನಿಮಿಷಗಳ ವೀಡಿಯೋ ತುಣುಕಷ್ಟೇ ಆಗಿರುವುದರಿಂದ, ಸಂಪೂರ್ಣ ಸಂದರ್ಭವನ್ನು ಪರಿಗಣಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ (NMC) ಸಾಮಾಜಿಕ ಮಾಧ್ಯಮ ಮಾರ್ಗಸೂಚಿಗಳ ಅನ್ವಯ ಪ್ರಕರಣವನ್ನು ಪರಿಶೀಲಿಸಲಾಗುತ್ತಿದ್ದು, ವರದಿ ಸಲ್ಲಿಕೆಯಾದ ಬಳಿಕ ಮುಂದಿನ ಕ್ರಮಗಳ ಬಗ್ಗೆ ಆಸ್ಪತ್ರೆಯ ಡೀನ್ ನಿರ್ಧಾರ ಕೈಗೊಳ್ಳಲಿದ್ದಾರೆ.
ಇಬ್ಬರು ಸದಸ್ಯರ ಸಮಿತಿ ರಚನೆ:
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಡೀನ್, “ವಿದ್ಯಾರ್ಥಿನಿಯೊಬ್ಬರು ಹಾಸ್ಯ ಕಾರ್ಯಕ್ರಮದ ವೇಳೆ ಕೆಲವು ಅಸಂವೇದನಾಶೀಲ ಹೇಳಿಕೆಗಳನ್ನು ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸುಮಾರು ಒಂದು ಗಂಟೆಯ ಕಾರ್ಯಕ್ರಮದ ನಾಲ್ಕು–ಐದು ನಿಮಿಷಗಳ ವೀಡಿಯೋ ತುಣುಕು ವೈರಲ್ ಆಗಿರುವ ಹಿನ್ನೆಲೆಯಲ್ಲಿ, ಸಂಪೂರ್ಣ ಕಾರ್ಯಕ್ರಮದ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ. ಈ ಉದ್ದೇಶಕ್ಕಾಗಿ ಇಬ್ಬರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದೆ” ಎಂದು ತಿಳಿಸಿದ್ದಾರೆ.
ಸಮಿತಿಯಲ್ಲಿ ಪದವಿಪೂರ್ವ ಹಾಸ್ಟೆಲ್ ವಾರ್ಡನ್ ಹಾಗೂ ಜೀವರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅನಿತಾ ಚಲಕ್ ಮತ್ತು ಕೆಇಎಂ ಆಸ್ಪತ್ರೆಯ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಮೇಲ್ವಿಚಾರಣೆಯನ್ನೂ ವಹಿಸಿರುವ ವೈದ್ಯಕೀಯ ಸಹಾಯಕ ಪ್ರಾಧ್ಯಾಪಕಿ ಡಾ. ಶ್ರದ್ಧಾ ಮೋರ್ ಸದಸ್ಯರಾಗಿದ್ದಾರೆ.
ಸೇಜಲ್ ವಿರುದ್ಧ ಅತಿಯಾದ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶ ಸಂಸ್ಥೆಗೆ ಇಲ್ಲದಿದ್ದರೂ, ಇಂತಹ ಹೇಳಿಕೆಗಳ ವಿರುದ್ಧ ಸ್ಪಷ್ಟ ಸಂದೇಶ ರವಾನಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಆಡಳಿತದ ವಲಯದಲ್ಲಿ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ತರಬೇತಿಗಾಗಿ ಮೃತದೇಹಗಳನ್ನು ದಾನ ಮಾಡುವ ವ್ಯವಸ್ಥೆಯ ಗೌರವವನ್ನು ಕಾಪಾಡುವುದು ಅಗತ್ಯವಾಗಿದ್ದು, ಸಾರ್ವಜನಿಕವಾಗಿ ಇಂತಹ ವಿಷಯಗಳನ್ನು ಹಾಸ್ಯದ ವಸ್ತುವಾಗಿಸಬಾರದು ಎಂದು ಕೆಲವು ಹಿರಿಯ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚನೆ:
ವಿವಾದ ತೀವ್ರಗೊಂಡ ಬಳಿಕ ಸೇಜಲ್ ಪವಾರ್ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಹಂಚಿಕೊಂಡು ಕ್ಷಮೆಯಾಚಿಸಿದ್ದಾರೆ.
“ವೈರಲ್ ಆಗಿರುವ ವೀಡಿಯೋವನ್ನು ಮರುಪರಿಶೀಲಿಸಿದ ಬಳಿಕ ನನ್ನ ಹೇಳಿಕೆಗಳಿಂದ ಜನರು ಅಸಮಾಧಾನಗೊಂಡಿರುವುದು ಅರ್ಥವಾಗಿದೆ. ವಿಷಯವು ಸೂಕ್ಷ್ಮವಾಗಿದ್ದು, ನನ್ನ ಮಾತುಗಳು ತಪ್ಪಾಗಿ ಅರ್ಥೈಸಿಕೊಳ್ಳುವಂತಾಗಿವೆ. ಯಾರನ್ನೂ ಅಗೌರವಿಸುವ ಉದ್ದೇಶ ಇರಲಿಲ್ಲ. ಆದರೂ, ನನ್ನ ಹೇಳಿಕೆಗಳಿಂದ ಉಂಟಾದ ನೋವಿಗೆ ವಿಷಾದ ವ್ಯಕ್ತಪಡಿಸುತ್ತೇನೆ" ಎಂದು ಸೇಜಲ್ ಪವಾರ್ ಹೇಳಿದ್ದಾರೆ.






