ಕೇರಳ | ಆಧುನಿಕ ಚಿಕಿತ್ಸೆಯನ್ನು ವಿರೋಧಿಸಿದ್ದ ಪೋಷಕರ ಒಂದು ವರ್ಷದ ಮಗು ಕಾಮಾಲೆ ರೋಗದಿಂದ ಮೃತ್ಯು!
ಮಗುವಿಗೆ ಇದುವರೆಗೆ ಯಾವುದೇ ಲಸಿಕೆ ನೀಡದ ಪೋಷಕರು

PC : indiatoday.in
ಮಲಪ್ಪುರಂ (ಕೇರಳ): ಕಾಮಾಲೆಯಿಂದ ಒಂದು ವರ್ಷದ ಮಗು ಮೃತಪಟ್ಟಿದ್ದು, ಮಗುವಿನ ಪೋಷಕರು ಆಧುನಿಕ ಚಿಕಿತ್ಸೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಈ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಮಗುವನ್ನು ಇಶಾನ್ ಇರ್ಹಾನ್ ಎಂದು ಗುರುತಿಸಲಾಗಿದ್ದು, ಕೊಟ್ಟಕ್ಕಲ್ ನಿವಾಸಿಗಳಾದ ಹೀರಾ ಹರೀರಾ ಹಾಗೂ ನವಾಝ್ ಎಂಬ ದಂಪತಿಗಳ ಪುತ್ರನಾಗಿದ್ದ. ಕಾಮಾಲೆಗೆ ತುತ್ತಾಗಿದ್ದ ಈ ಮಗು ಜೂನ್ 27ರಂದು ಮೃತಪಟ್ಟಿತ್ತು. ಈ ಕುರಿತು ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಮಗುವಿಗೆ ಸೂಕ್ತ ವೈದ್ಯಕೀಯ ಆರೈಕೆಯನ್ನು ಒದಗಿಸಿಗಿಲ್ಲ ಎಂದು ಶಂಕಿಸಿದ್ದಾರೆ. ಹೀಗಾಗಿ, ಈ ಹಿಂದೆ ಆಧುನಿಕ ವೈದ್ಯಕೀಯ ಪದ್ಧತಿಯನ್ನು ವಿರೋಧಿಸಿ, ಆಕ್ಯುಪಂಕ್ಚರ್ ವೃತ್ತಿಪರೆಯಾದ ಮಗುವಿನ ತಾಯಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
ಘಟನೆಯ ಸಂಬಂಧ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೃತ ಮಗುವಿನ ಪೋಷಕರ ನಿವಾಸಕ್ಕೆ ಭೇಟಿ ನೀಡಿದಾಗ, ಮಗುವಿಗೆ ಮೊಲೆ ಹಾಲು ಕುಡಿಸುತ್ತಿದ್ದಂತೆಯೇ, ಅದು ಮೃತಪಟ್ಟಿತು ಎಂದು ಮಗುವಿನ ಪೋಷಕರು ಅವರಿಗೆ ಮಾಹಿತಿ ನೀಡಿದ್ದಾರೆ. ಮಗು ಹುಟ್ಟಿದಾಗಿನಿಂದ ಅದಕ್ಕೆ ಯಾವುದೇ ಲಸಿಕೆ ನೀಡಿರಲಿಲ್ಲ ಎಂಬ ಸಂಗತಿಯೂ ಆರೋಗ್ಯ ಇಲಾಖೆಯ ಅಧಿಕಾರಿಗಳ ವಿಚಾರಣೆಯ ಸಂದರ್ಭದಲ್ಲಿ ಬಯಲಾಗಿದೆ.
ಹೀಗಿದ್ದೂ, ಪೋಷಕರು ಮೃತ ಮಗುವಿನ ಅಂತ್ಯಕ್ರಿಯೆ ನಡೆಸಿದ್ದರು. ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಮೃತ ದೇಹವನ್ನು ಸಮಾಧಿಯಿಂದ ಹೊರ ತೆಗೆಯುವ ನಿರ್ಧಾರವನ್ನು ಪೊಲೀಸರು ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯನ್ನು ಆಧರಿಸಿ ಪೊಲೀಸರು ಮುಂದಿನ ಕ್ರಮ ಜರುಗಿಸಲಿದ್ದಾರೆ.







