ಆಹಾರ ಪೊಟ್ಟಣ ಕದ್ದ ಕಳ್ಳನಿಗೆ ‘ಮೀಸಾ ಮಾಧವನ್’ಪ್ರಶಸ್ತಿ ನೀಡಿದ ಕೇರಳದ ಬೇಕರಿ ಮಾಲಕ

Photo Credit : mathrubhumi.com
ತಿರುವನಂತಪುರ,ಅ.12: 500 ರೂ. ಮುಖಬೆಲೆಯ ಆಹಾರ ಪ್ಯಾಕೇಟ್ ಕದ್ದಿದ್ದ ಯುವಕನೊಬ್ಬನನ್ನು ಕೇರಳ ಚಿರಾಯಿಂಕಿಲ್ನ ಬೇಕರಿ ಮಾಲಕರೊಬ್ಬರು ವಿಚಿತ್ರವಾದ ‘ಮೀಸಾ ಮಾಧವನ್’ ಪ್ರಶಸ್ತಿಯನ್ನು ನೀಡಿದ ಸ್ವಾರಸ್ಯಕರ ಘಟನೆ ಶನಿವಾರ ವರದಿಯಾಗಿದೆ.
ಕಡಕ್ಕವೂರ್ನ ಆದಿತ್ಯ ಬೇಕರಿ ಹಾಗೂ ಫಾಸ್ಟ್ಫುಡ್ ಮಳಿಗೆಯ ಮಾಲಕ ಆನೀಶ್ ಅವರು ಚೋರ ಯುವಕನಿಗೆ, ಆತನ ಮನೆಯಲ್ಲೇ ಪ್ರಶಸ್ತಿಯನ್ನು ನೀಡುವ ಮೂಲಕ ಅಸಾಧಾರಣ ‘ಔದಾರ್ಯ’ವನ್ನು ಪ್ರದರ್ಶಿಸಿದ್ದಾರೆ.
ಬುಧವಾರ ಸಂಜೆ ಅನೀಶ್ ಅವರ ಬೇಕರಿಯಲ್ಲಿ ಈ ಕಳ್ಳತನ ನಡೆದಿತ್ತು. ಯುವಕನೊಬ್ಬ ಮೋಟಾರ್ ಸೈಕಲ್ನಲ್ಲಿ ಆಗಮಿಸಿ, ಆಹಾರದ ಮಳಿಗೆಯನ್ನು ಪ್ರವೇಶಿಸಿ, ಒಂದಿಷ್ಟು ಆಹಾರ ಸೇವಿಸಿದ್ದಾನೆ. ಬಳಿಕ ಆಹಾರದ ಪೊಟ್ಟಣವೊಂದನ್ನು ಬಾಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳದಲ್ಲಿದ್ದವರು ಸಂದೇಹಗೊಂಡು ಆನೀಶ್ ಹಾಗೂ ಅವರ ಪತ್ನಿಯನ್ನು ಎಚ್ಚರಿಸಿದ್ದಾರೆ. ಸಿಸಿಟಿವಿ ವೀಡಿಯೊವನ್ನು ಪರಿಶೀಲಿಸಿದ ದಂಪತಿಗೆ ಆಹಾರಪೊಟ್ಟಣ ಕಳವಾಗಿರುವುದು ದೃಢಪಟ್ಟಿತು. ಆದರೆ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು, ಆ ಯುವಕನನ್ನು ಪತ್ತೆಹಚ್ಚುವಲ್ಲಿ ಸಫಲರಾದರು.
ಆದರೆ ಪೊಲೀಸರಿಗೆ ದೂರು ನೀಡುವ ಬದಲು ಆನೀಶ್ ಹಾಗೂ ಅವರ ತಂಡವು, ವಿಶಿಷ್ಟ ಪ್ರಶಸ್ತಿಯನ್ನು ನೀಡುವ ಮೂಲಕ ಆ ಯುವಕನನ್ನು ಅಶ್ಚರ್ಯಚಕಿತಗೊಳಿಸಲು ನಿರ್ಧರಿಸಿದರು. ಆತನ ಮನೆಗೆ ಭೇಟಿ ನೀಡಿದ ಆನೀಶ್ ಅವರು , ಆತನಿಗೆ ‘ಮೀಸಾ ಮಾಧವನ್’ ಪ್ರಶಸ್ತಿಯನ್ನು ನೀಡಿದರು. ಕಳ್ಳತನದಲ್ಲಿ ಉತ್ಕೃಷ್ಟ ಕೌಶಲ್ಯವನ್ನು ಪ್ರದರ್ಶಿಸಿದ್ದಕ್ಕಾಗಿ ಈ ಬಹುಮಾನ ನೀಡಿರುವುದಾಗಿ ಅನೀಶ್ ವಿವರಿಸಿದ್ದಾರೆ. ವೀಡಿಯೊದಲ್ಲಿ ಮುಜಗರಕ್ಕೊಳಗಾದ ಯುವಕ ನಾನು ತಪ್ಪು ಮಾಡಿದ್ದೇನೆ ಎಂದು ಹೇಳುವುದು, ಅದಕ್ಕೆ ಅನೀಶ್ ಅದೇನು ದೊಡ್ಡ ವಿಷಯವಲ್ಲ ಎನ್ನುವುದೂ ಸೆರೆಯಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಮಧ್ಯೆ ಕಡಕ್ಕಾವೂರು ಪೊಲೀಸರು ಅಂಗಡಿಯಿಂದ ಸಾಮಾಗ್ರಿ ಕಳ್ಳತನ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.







