ಕೇರಳ | ಸುರೇಶ್ ಗೋಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪಕ್ಷ ತೊರೆದ ಬಿಜೆಪಿ ಕಾರ್ಯಕರ್ತರು

ಸುರೇಶ್ ಗೋಪಿ (Photo: PTI)
ತಿರುವನಂತಪುರಂ: ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕೇರಳದ ತ್ರಿಶೂರ್ನಲ್ಲಿ ಬಿಜೆಪಿ ಕಾರ್ಯಕರ್ತರ ಗುಂಪೊಂದು ಪಕ್ಷ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ತ್ರಿಶೂರ್ ಉಪನಗರದಲ್ಲಿರುವ ವರಂದರಪಳ್ಳಿಯ ನಾಲ್ವರು ಬಿಜೆಪಿ ಕಾರ್ಯಕರ್ತರು, ಸುರೇಶ್ ಗೋಪಿ ಆಯೋಜಿಸಿದ್ದ ʼಕಳಿಂಗು ಸಂವಾದʼದಲ್ಲಿ ಸುರೇಶ್ ಗೋಪಿ ಅವರ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷವನ್ನು ತೊರೆದಿದ್ದಾರೆ.
ಭ್ರಷ್ಟಾಚಾರದಿಂದ ಬಳಲುತ್ತಿರುವ ಸಹಕಾರಿ ಬ್ಯಾಂಕುಗಳಿಂದ ಠೇವಣಿಗಳನ್ನು ಮರುಪಡೆಯಲು ಸಹಾಯ ಮಾಡುವಂತೆ ಮತ್ತು ಬಡವರಿಗೆ ಮನೆ ನಿರ್ಮಾಣಕ್ಕೆ ಸಹಾಯ ಕೋರಿದಾಗ ಅವರ ಮನವಿಗಳನ್ನು ಸುರೇಶ್ ಗೋಪಿ ತಿರಸ್ಕರಿಸಿದ್ದರು. ಇದು ಕೂಡ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಬಿಜೆಪಿ ಕಾರ್ಯಕರ್ತರಾದ ಪ್ರಸಾದ್, ಸುರೇಶ್, ಸಾಲಿನಿ ಮತ್ತು ರಾಜಶ್ರೀ ಅವರು ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದರು. ಜನಸಾಮಾನ್ಯರ ಬಗ್ಗೆ ಸುರೇಶ್ ಗೋಪಿಯವರ ವರ್ತನೆಯಿಂದ ಅತೃಪ್ತರಾಗಿದ್ದೇವೆ ಮತ್ತು ಆದ್ದರಿಂದ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇವೆ ಎಂದು ಅವರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು.





