ಕೇರಳ ಬಾಂಬ್ ಸ್ಫೋಟ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್: 54 ಪ್ರಕರಣ ದಾಖಲು

Photo: PTI
ತಿರುವನಂತಪುರಂ: ಕೊಚ್ಚಿಯಲ್ಲಿನ ಕಳಮಶ್ಶೇರಿಯ ಪ್ರಾರ್ಥನಾ ಸಭೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಬಾಂಬ್ ಸ್ಫೋಟದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕೋಮು ಪ್ರಚೋದನೆಯನ್ನುಂಟು ಮಾಡುವ ಪೋಸ್ಟ್ ಗಳ ವಿರುದ್ಧ ಕೇರಳ ಪೊಲೀಸರು 54 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಶನಿವಾರ ಪ್ರತಿಕ್ರಿಯಿಸಿರುವ ಪೊಲೀಸರು, ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಇಲ್ಲಿ 26 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರ ನಂತರ ಕ್ರಮವಾಗಿ ಎರ್ನಾಕುಲಂನಲ್ಲಿ 15 ಹಾಗೂ ತಿರುವನಂತಪುರಂನಲ್ಲಿ 5 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ತ್ರಿಶೂರ್ ನಗರ ಹಾಗೂ ಕೊಟ್ಟಾಯಂನಲ್ಲಿ ತಲಾ ಎರಡು ಪ್ರಕರಣಗಳು ದಾಖಲಾಗಿದ್ದರೆ, ಪಟ್ಟಣಂತಿಟ್ಟ, ಅಲಪ್ಪುಝ, ಪಾಲಕ್ಕಡ್ ಹಾಗೂ ಕೋಯಿಕ್ಕೋಡ್ ಗ್ರಾಮೀಣ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಕೋಮುದ್ವೇಷವನ್ನು ಪ್ರಚೋದಿಸುವ ಪೋಸ್ಟ್ ಗಳನ್ನು ಹಂಚಿಕೊಳ್ಳಲು ಅಸಂಖ್ಯಾತ ನಕಲಿ ಸ್ವವಿವರ ಖಾತೆಗಳನ್ನು ಬಳಸಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ಪ್ರಕಟಣೆಯಲ್ಲಿ ಪೊಲೀಸರು ತಿಳಿಸಿದ್ದಾರೆ.
“ಇಂತಹ ನಕಲಿ ಖಾತೆಗಳ ಐಪಿ ವಿಳಾಸಗಳನ್ನು ಪತ್ತೆ ಹಚ್ಚಲು ಫೇಸ್ ಬುಕ್, ಇನ್ಸ್ಟಾಗ್ರಾಮ್, ಎಕ್ಸ್, ವಾಟ್ಸ್ ಆ್ಯಪ್ ಹಾಗೂ ಇನ್ನಿತರ ಸಾಮಾಜಿಕ ಮಾಧ್ಯಮ ವೇದಿಕೆಗಳ ನೆರವಿಗೆ ಮನವಿ ಮಾಡಲಾಗಿದೆ. ಇಂತಹ ಖಾತೆಗಳ ನಿರ್ವಹಣಾಕಾರರನ್ನು ಪತ್ತೆ ಹಚ್ಚಲು ರಾಜ್ಯದ ಸೈಬರ್ ಘಟಕವು ದಿನವಿಡೀ ಕೆಲಸ ಮಾಡುತ್ತಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.







