ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಗಂಭೀರ ಸವಾಲು : ಎಸ್ಐಆರ್ ವಿರೋಧಿಸುವಂತೆ ಕೇರಳ ಸಿಎಂ ಆಗ್ರಹ

ಪಿಣರಾಯಿ ವಿಜಯನ್ | PC : PTI
ತಿರವನಂತಪುರ,ಅ.28: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಎರಡನೇ ಹಂತವನ್ನು ಹಲವಾರು ರಾಜ್ಯಗಳಿಗೆ ವಿಸ್ತರಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಮಂಗಳವಾರ ಬಲವಾಗಿ ಖಂಡಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅದು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವವನ್ನು ಗೌರವಿಸುವ ಎಲ್ಲರೂ ಒಂದಾಗಿ ಈ ಪ್ರಕ್ರಿಯೆಯನ್ನು ವಿರೋಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಕ್ರಮವು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಗಂಭೀರ ಸವಾಲನ್ನು ಒಡ್ಡುತ್ತದೆ ಮತ್ತು ಚುನಾವಣಾ ಆಯೋಗದ ಉದ್ದೇಶಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಇದರಿಂದಾಗಿ ಚುನಾವಣಾ ವ್ಯವಸ್ಥೆಯಲ್ಲಿ ಸಾರ್ವಜನಿಕರು ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿಕೆಯೊಂದರಲ್ಲಿ ಅವರು ಎಚ್ಚರಿಕೆ ನೀಡಿದ್ದಾರೆ.
ವಿಜಯನ್ ಎಸ್ಐಆರ್ ಅನ್ನು ರಾಜಕೀಯ ಲಾಭಕ್ಕಾಗಿ ಸಾರ್ವತ್ರಿಕ ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಮತ್ತು ಮತದಾರರ ಪಟ್ಟಿಗಳನ್ನು ತಿರುಚುವ ಸ್ಪಷ್ಟ ಪ್ರಯತ್ನ ಎಂದು ಬಣ್ಣಿಸಿದ್ದಾರೆ.
2026ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಕೇರಳ, ತಮಿಳುನಾಡು, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನವಂಬರ್ ಮತ್ತು ಫೆಬ್ರವರಿ ನಡುವೆ ಎಸ್ಐಆರ್ ನಡೆಸಲಾಗುವುದು ಎಂದು ಚುನಾವಣಾ ಆಯೋಗವು ಸೋಮವಾರ ಪ್ರಕಟಿಸಿದೆ.
ಎಸ್ಐಆರ್ ಕುರಿತು ಕಳವಳಗಳನ್ನು ಎತ್ತಿ ತೋರಿಸಿರುವ ಮುಖ್ಯಮಂತ್ರಿಗಳು, ರಾಜಕೀಯ ಲಾಭಕ್ಕಾಗಿ ಕೇಂದ್ರದ ಅಧಿಕಾರಿಗಳು ಎಸ್ಐಆರ್ ಬಳಸುತ್ತಿದ್ದಾರೆ ಎಂದು ಆರೋಪಿಸಿರುವ ಟೀಕೆಗಳನ್ನು ನಿರಾಕರಿಸಲಾಗಿಲ್ಲ ಎಂದು ಬೆಟ್ಟು ಮಾಡಿದ್ದಾರೆ.
ಬಿಹಾರ ಎಸ್ಐಆರ್ನ ಸಾಂವಿಧಾನಿಕ ಸಿಂಧುತ್ವವು ಸರ್ವೋಚ್ಚ ನ್ಯಾಯಾಲಯದ ಪರಿಶೀಲನೆಯಲ್ಲಿರುವಾಗ ಅದೇ ಪ್ರಕ್ರಿಯೆಯನ್ನು ಇತರ ರಾಜ್ಯಗಳಿಗೂ ವಿಸ್ತರಿಸುವ ಚುನಾವಣಾ ಆಯೋಗದ ಕ್ರಮವನ್ನು ಅಮಾಯಕ ಅಥವಾ ನಿಷ್ಪಕ್ಷ ಎಂದು ಪರಿಗಣಿಸಲು ಸಾಧ್ಯವಿಲ್ಲ. ದೀರ್ಘಕಾಲದ ಸಿದ್ಧತೆ ಮತ್ತು ವ್ಯಾಪಕ ಸಮಾಲೋಚನೆಯ ಅಗತ್ಯವಿರುವ ಇಂತಹ ವಿಶೇಷ ತೀವ್ರ ಪರಿಷ್ಕರಣೆಯನ್ನು ತರಾತುರಿಯಲ್ಲಿ ನಡೆಸುವುದು ಜನಾದೇಶವನ್ನು ಕಡೆಗಣಿಸುವ ಪ್ರಯತ್ನವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ವಿಜಯನ್ ಪ್ರತಿಪಾದಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆಗಳು ನಡೆಯುತ್ತಿರುವುದರಿಂದ ಈಗ ಎಸ್ಐಆರ್ಅನ್ನು ಕೈಗೊಳ್ಳುವುದು ಅಪ್ರಾಯೋಗಿಕವಾಗುತ್ತದೆ ಎಂದು ಕೇರಳದ ಮುಖ್ಯ ಚುನಾವಣಾಧಿಕಾರಿಗಳು ಈಗಾಗಲೇ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ ಎಂದು ಬೆಟ್ಟು ಮಾಡಿದ ವಿಜಯನ್, ಈ ಎಚ್ಚರಿಕೆಗಳ ಹೊರತಾಗಿಯೂ ಈ ಹಂತದಲ್ಲಿ ಎಸ್ಐಆರ್ ಮುಂದುವರಿಕೆಗೆ ಒತ್ತಡವನ್ನು ಹೇರುವುದು ಈ ಕ್ರಮದ ಹಿಂದಿನ ಉದ್ದೇಶದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ.
ಕೇರಳವು ಎಸ್ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ತನ್ನ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿರುವ ಮೊದಲ ರಾಜ್ಯವಾಗಿದೆ.
ಮತದಾರರ ಪಟ್ಟಿಯಿಂದ 65 ಲಕ್ಷ ಹೆಸರುಗಳನ್ನು ಅಳಿಸಲಾಗಿದೆ ಎಂದು ವರದಿಯಾಗಿರುವ ಬಿಹಾರದಲ್ಲಿನ ಸ್ಥಿತಿಯನ್ನು ಉಲ್ಲೇಖಿಸಿರುವ ವಿಜಯನ್, ಇದು ಸಾರ್ವತ್ರಿಕ ಮತದಾನದ ಹಕ್ಕನ್ನು ಖಾತರಿಪಡಿಸಿರುವ ಸಂವಿಧಾನದ ವಿಧಿ 326ರ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಆಗಿರುವ ಮತದಾನದ ಹಕ್ಕನ್ನು ಕಿತ್ತುಕೊಳ್ಳಲು ಅಥವಾ ರಾಜಕೀಯ ಹಿತಾಸಕ್ತಿಗಳಿಗೆ ತಕ್ಕಂತೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿರುವ ವಿಜಯನ್, ಎಸ್ಐಆರ್ ರಾಷ್ಟ್ರೀಯ ನಾಗರಿಕರ ನೋಂದಣಿಯ ಹಿಂಬಾಗಿಲ ಅನುಷ್ಠಾನವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.







