CJI ರಾಜೀನಾಮೆಗೆ ಆಗ್ರಹಿಸಿ ಪೋಸ್ಟ್: ಕೇರಳ ಕಾಂಗ್ರೆಸ್ ನಿಂದ ಬೇಷರತ್ ಕ್ಷಮೆಯಾಚನೆ
ಪಕ್ಷದ ಅಧಿಕೃತ ಖಾತೆಯಲ್ಲಿ ವಿವಾದಿತ ಪೋಸ್ಟ್; ಕಾರ್ಯಕರ್ತನ ವಿರುದ್ಧ ಕ್ರಮ

ಸಿಜೆಐ ಸೂರ್ಯಕಾಂತ್ (Photo: PTI)
ತಿರುವನಂತಪುರ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯಕಾಂತ್ ಅವರಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಪ್ರಕಟವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಬೇಷರತ್ ಕ್ಷಮೆಯಾಚಿಸಿದೆ. ಪೋಸ್ಟ್ನ ಭಾಷೆ ಸೂಕ್ತವಾಗಿರಲಿಲ್ಲ ಎಂದು ಒಪ್ಪಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್, ಸಂಬಂಧಪಟ್ಟ ಕಾರ್ಯಕರ್ತನ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ವಕೀಲ ಹಾಗೂ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಜಂಟಿ ಕಾರ್ಯದರ್ಶಿ ಮೀನೇಶ್ ದುಬೆ ನೀಡಿದ್ದ ಕಾನೂನು ನೋಟಿಸ್ಗೆ ಅಕ್ಟೋಬರ್ 22ರಂದು ಉತ್ತರಿಸಿದ ಜೋಸೆಫ್, ಮುಖ್ಯ ನ್ಯಾಯಮೂರ್ತಿಗಳ ಕ್ಷಮೆ ಕೋರಿದ್ದಾರೆ.
ಅಕ್ಟೋಬರ್ 12ರಂದು ಕಾಂಗ್ರೆಸ್ ನ ಅಧಿಕೃತ ಎಕ್ಸ್ ಖಾತೆ (@INCKerala) ಯಲ್ಲಿ, ‘ಪ್ರಿಯ ಸೂರ್ಯಕಾಂತ್, ಕಾನೂನು ಮತ್ತು ಸುವ್ಯವಸ್ಥೆ ನಿಮ್ಮ ಕಾರ್ಯವ್ಯಾಪ್ತಿಗೆ ಸೇರಿಲ್ಲವಾದರೆ, ಈಗಲೇ ರಾಜೀನಾಮೆ ನೀಡಿ. ಅದನ್ನು ನಿಭಾಯಿಸಬಲ್ಲ ನಿಮ್ಮ ಬದಲಿಯನ್ನು ನಾವು ಹುಡುಕುತ್ತೇವೆ’ ಎಂಬರ್ಥದ ಪೋಸ್ಟ್ ಪ್ರಕಟವಾಗಿತ್ತು. ಈ ಪೋಸ್ಟ್ಗೆ ಸಂಬಂಧಿಸಿದಂತೆ ನ್ಯಾಯಾಲಯ ನಿಂದನೆ ಪ್ರಕರಣದ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸುವುದಾಗಿ ದುಬೆ ಎಚ್ಚರಿಕೆ ನೀಡಿದ್ದರು.
ಕಾರ್ಯಕರ್ತನ ವಿರುದ್ಧ ಕ್ರಮ
ಪಕ್ಷದ ನಾಯಕತ್ವದ ಅರಿವು, ಒಪ್ಪಿಗೆ ಅಥವಾ ಸಮಾಲೋಚನೆ ಇಲ್ಲದೆ ಕಾರ್ಯಕರ್ತ ವಿಜಯ್ ತೊಟ್ಟತಿಲ್ ಪೋಸ್ಟ್ ಬರೆದು ಪ್ರಕಟಿಸಿದ್ದರು ಎಂದು ಜೋಸೆಫ್ ಸ್ಪಷ್ಟಪಡಿಸಿದ್ದಾರೆ. ತೊಟ್ಟತಿಲ್ ಅವರನ್ನು ತಕ್ಷಣವೇ ಜವಾಬ್ದಾರಿಗಳಿಂದ ತೆಗೆದುಹಾಕಲಾಗಿದ್ದು, ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
‘ಮುಖ್ಯ ನ್ಯಾಯಮೂರ್ತಿಗಳಿಗೆ ರಾಜೀನಾಮೆ ನೀಡುವಂತೆ ಒತ್ತಾಯಿಸುವುದು ಮತ್ತು ಅವರ ಬದಲಿಯನ್ನು ಹುಡುಕುವ ಸಲಹೆ ನೀಡುವುದು ಸೂಕ್ತವಲ್ಲ. ಇಂತಹ ಪೋಸ್ಟ್ ಅಧಿಕೃತ ಪಕ್ಷದ ವೇದಿಕೆಯಲ್ಲಿ ಪ್ರಕಟವಾಗಬಾರದಿತ್ತು. ಪೋಸ್ಟ್ ಮತ್ತು ಅದರ ಭಾಷೆಯಿಂದ ಉಂಟಾದ ಅಗೌರವಕ್ಕಾಗಿ ಭಾರತದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಲ್ಲಿ ಬೇಷರತ್ ಕ್ಷಮೆಯಾಚಿಸುತ್ತೇನೆ’ ಎಂದು ಜೋಸೆಫ್ ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಭಿವ್ಯಕ್ತಿಗೆ ರಕ್ಷಣೆ ಇದ್ದರೂ, ಸಾಂಸ್ಥಿಕ ಘನತೆಯನ್ನು ಕಾಪಾಡುವ ಹೊಣೆಗಾರಿಕೆಯಿಂದ ರಾಜಕೀಯ ಪಕ್ಷಗಳು ಮುಕ್ತವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯವು ಸಾಂವಿಧಾನಿಕ ಹುದ್ದೆಗಳ ಘನತೆಯನ್ನು ಕುಂದಿಸುವ ಭಾಷೆಯ ಬಳಕೆಗೆ ಸಮರ್ಥನೆಯಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಆಂತರಿಕ ತನಿಖೆ
ಪೋಸ್ಟ್ ಗೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ತಿರುಚಿರುವುದು ಮತ್ತು ವ್ಯವಸ್ಥಿತ ಲೋಪಗಳ ಕುರಿತು ವ್ಯಕ್ತವಾಗಿರುವ ಕಳವಳಗಳ ಹಿನ್ನೆಲೆಯಲ್ಲಿ, ಪಕ್ಷದ ಡಿಜಿಟಲ್ ಮೇಲ್ವಿಚಾರಣಾ ಪ್ರಕ್ರಿಯೆಗಳನ್ನು ಪರಿಶೀಲಿಸಲು ಆಂತರಿಕ ವಿಚಾರಣೆ ಆರಂಭಿಸಲಾಗಿದೆ ಎಂದು ಕೆಪಿಸಿಸಿ ತಿಳಿಸಿದೆ. ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ವಹಣೆಗೆ ಬಾಹ್ಯ ಏಜೆನ್ಸಿಗಳ ನೆರವು ಪಡೆಯಲಾಗುತ್ತಿದೆ ಎಂದೂ ಸ್ಪಷ್ಟಪಡಿಸಿದೆ.
ಸಂಬಂಧಿತ ಎಲ್ಲ ಎಲೆಕ್ಟ್ರಾನಿಕ್ ದಾಖಲೆಗಳು, ಸಾಧನಗಳ ಪ್ರವೇಶ ದಾಖಲೆಗಳು ಮತ್ತು ಸಂವಹನಗಳನ್ನು ಕಾನೂನಿನ ಪ್ರಕಾರ ಸಂರಕ್ಷಿಸಲಾಗುವುದು ಎಂದು ಸಮಿತಿ ಭರವಸೆ ನೀಡಿದೆ. ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸ್ಪಷ್ಟೀಕರಣ ಮತ್ತು ಕ್ಷಮೆಯಾಚನೆಯನ್ನೂ ಪ್ರಕಟಿಸುವುದಾಗಿ ತಿಳಿಸಿದೆ.






