Kerala | ಕಾಂಗ್ರೆಸ್ ಸಚಿವ ಸಂಪುಟ ಬಹುತೇಕ ಪೂರ್ಣ : ಚೆನ್ನಿತ್ತಲಗೆ ಗೃಹ ಖಾತೆ ?

Photo credit : indiatimes
ತಿರುವನಂತಪುರ: ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ.ಸತೀಶನ್ ಈ ತಿಂಗಳ 18ರಂದು ಪ್ರಮಾಣವಚನ ಸ್ವೀಕರಿಸಲು ಸಜ್ಜಾಗಿದ್ದು, ಪಕ್ಷದ ವಲಯದಲ್ಲಿ ಸಮಾಲೋಚನೆ ಮತ್ತು ಆಪ್ತ ಸಂವಾದ ನಡೆಸಿದ ಬಳಿಕ ಸಂಭಾವ್ಯ ಸಚಿವ ಸಂಪುಟವನ್ನು ಪೂರ್ಣಗೊಳಿಸಿದೆ. ಭಾನುವಾರ ಇಡೀ ಸಚಿವ ಸಂಪುಟದ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದ ರಮೇಶ್ ಚೆನ್ನಿತ್ತಲ ಅವರ ಜತೆ ಎರಡನೇ ಸುತ್ತಿನ ಚರ್ಚೆಯ ಬಳಿಕ ರಮೇಶ್ ಸರ್ಕಾರ ಸೇರುವಂತೆ ಮನವೊಲಿಸುವಲ್ಲಿ ಸತೀಶನ್ ಯಶಸ್ವಿಯಾಗಿದ್ದಾರೆ. ಪಕ್ಷದ ಆಂತರಿಕ ಒಡಂಬಡಿಕೆಯ ಪ್ರಕಾರ, ರಮೇಶ್ ಗೃಹ ಖಾತೆ, ವಿಚಕ್ಷಣಾ ಖಾತೆಗಳನ್ನು ನಿಭಾಯಿಸಲಿದ್ದು, ಸಂಪುಟದಲ್ಲಿ ಎರಡನೇ ಪ್ರಮುಖ ನಾಯಕ ಎನಿಸಿಕೊಳ್ಳಲಿದ್ದಾರೆ.
ಸತೀಶನ್ ಅವರ ಮನವಿಯನ್ನು ಒಪ್ಪಿಕೊಳ್ಳುವಂತೆ ರಮೇಶ್ ಅವರ ಮನವೊಲಿಸುವಲ್ಲಿ ಪಕ್ಷದ ಹೈಕಮಾಂಡ್ ಕೂಡಾ ಮಧ್ಯಪ್ರವೇಶಿಸಿದೆ ಎನ್ನಲಾಗಿದೆ. ಈ ಮೂಲಕ ಸರ್ಕಾರದಲ್ಲಿ ಅವರ ಪಾತ್ರದ ಬಗೆಗಿನ ಅನಿಶ್ಚಿತತೆಗೆ ತೆರೆ ಎಳೆದಿದೆ. ಹಣಕಾಸು ಖಾತೆಯನ್ನು ಸ್ವತಃ ಸತೀಶನ್ ಉಳಿಸಿಕೊಳ್ಳುವುದು ಬಹುತೇಕ ಖಚಿತ.
ಪಕ್ಷದ ಸಂಘಟನೆ ಜವಾಬ್ದಾರಿ ಹೊಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಜತೆಗೂ ಸತೀಶನ್ ಮಹತ್ವದ ಚರ್ಚೆ ನಡೆಸಿದ್ದಾರೆ. ವೇಣುಗೋಪಾಲ್ ಅವರ ನಿವಾಸದಲ್ಲಿ ಈ ಚರ್ಚೆ ನಡೆದಿದ್ದು, ಸತೀಶನ್ ಸಿಎಂ ಹುದ್ದೆಗೆ ನಿಯೋಜಿತರಾದ ಬಳಿಕ ಉಭಯ ಮುಖಂಡರ ಪ್ರಥಮ ಭೇಟಿ ಇದಾಗಿತ್ತು.






