ಚಿನ್ನ, BMW ಕಾರಿಗೆ ಬೇಡಿಕೆ ಮುಂದಿಟ್ಟ ಪ್ರಿಯಕರ: ವಿವಾಹ ರದ್ದುಗೊಂಡ ಬೆನ್ನಲ್ಲೇ ಆತ್ಮಹತ್ಯೆಗೈದ ಯುವ ವೈದ್ಯೆ
ಡಾ. ಇ.ಎ. ರುವೈಸ್ / ಡಾ. ಶಹಾನ (Photo credit: mathrubhumi.com)
ತಿರುವನಂತಪುರಂ: ತನ್ನ ವರದಕ್ಷಿಣ ಬೇಡಿಕೆ ಪೂರೈಸದೆ ಪ್ರಿಯಕರ ವಿವಾಹವಾಗಲು ನಿರಾಕರಿಸಿದರಿಂದ ತೀವ್ರ ಮನನೊಂದು 26 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳ ರಾಜಧಾನಿ ತಿರುವನಂತಪುರಂನಿಂದ ವರದಿಯಾಗಿದೆ. ಮೃತ ವೈದ್ಯೆಯನ್ನು ಡಾ. ಶಹಾನ ಎಂದು ಗುರುತಿಸಲಾಗಿದೆ. ಆಕೆ ತಿರುವನಂತಪುರಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಜರಿ ವಿಭಾಗದಲ್ಲಿ ಸ್ನಾತ್ತಕೋತ್ತರ ಶಿಕ್ಷಣ ಪಡೆಯುತ್ತಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಹಾಗೂ ವರದಕ್ಷಿಣ ಕಾಯಿದೆಯಡಿ ಆಕೆಯ ಪ್ರಿಯಕರ ಡಾ. ಇ.ಎ. ರುವೈಸ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಲಾಗಿದೆ.
ಡಾ. ಶಹಾನ ತನ್ನ ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ವಾಸಿಸುತ್ತಿದ್ದರು. ಗಲ್ಫ್ನಲ್ಲಿ ಉದ್ಯೋಗದಲ್ಲಿದ್ದ ಆಕೆಯ ತಂದೆ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು.
ಡಾ. ಶಹಾನ ಮತ್ತು ಡಾ. ರುವೈಸ್ ವಿವಾಹವಾಗಲು ನಿರ್ಧರಿಸಿದ್ದರೂ, ರುವೈಸ್ ಕುಟುಂಬ 150 ಪವನ್ ಚಿನ್ನಾಭರಣ, 15 ಎಕರೆ ಜಮೀನು ಮತ್ತು ಬಿಎಂಡಬ್ಲ್ಯು ಕಾರಿಗೆ ಬೇಡಿಕೆ ಇರಿಸಿತ್ತು. ಆದರೆ ಈ ಬೇಡಿಕೆ ಪೂರೈಸಲು ಆಗದು ಎಂದು ಶಹಾನ ಕುಟುಂಬ ಹೇಳಿದ ನಂತರ ರುವೈಸ್ ಕುಟುಂಬ ವಿವಾಹ ರದ್ದುಗೊಳಿಸಿತ್ತು.
ಇದರಿಂದ ಬೇಸತ್ತು ಡಾ. ಶಹಾನ ಆತ್ಮಹತ್ಯೆ ಮಾಡಿಕೊಂಡರೆನ್ನಲಾಗಿದೆ. ಆಕೆಯ ಸುಸೈಡ್ ನೋಟಿನಲ್ಲಿ “ಎಲ್ಲರಿಗೂ ಹಣವೇ ಬೇಕು,” ಎಂದು ಬರೆದಿದ್ದಾರೆನ್ನಲಾಗಿದೆ.
ವರದಕ್ಷಿಣೆ ಆರೋಪ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ್ದಾರೆ.
ರಾಜ್ಯ ಅಲ್ಪಸಂಖ್ಯಾತ ಆಯೋಗ ಕೂಡ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಆಯೋಗದ ಮುಂದೆ ಡಿಸೆಂಬರ್ 14ರಂದು ಹಾಜರಾಗಿ ವರದಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷ ಎ ಎ ರಶೀದ್ ಅವರು ಜಿಲ್ಲಾ ಕಲೆಕ್ಟರ್, ಪೊಲೀಸ್ ಆಯುಕ್ತರು ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಸೂಚಿಸಿದ್ದಾರೆ.