Kerala | ಯುಡಿಎಫ್ ಗೆದ್ದರೆ ಕೆ.ಸಿ.ವೇಣುಗೋಪಾಲ್ ಸಿಎಂ?

Photo : PTI
ಹೊಸದಿಲ್ಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಮತ ಎಣಿಕೆ ಸೋಮವಾರ (ಮೇ 4) ನಡೆಯಲಿದೆ.
ಚುನಾವಣೋತ್ತರ ಸಮೀಕ್ಷೆಗಳು ಕೇರಳದಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಬಹುಮತ ಸಾಧ್ಯತೆ ಸೂಚಿಸುತ್ತಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಆಯ್ಕೆಯಾಗಬಹುದು ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಕಾಂಗ್ರೆಸ್ ನಾಯಕ ತಾರಿಕ್ ಅಹ್ಮದ್ ಪ್ರತಿಕ್ರಿಯಿಸಿ, “ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಆಸಕ್ತಿ ತೋರಿಸಿದರೆ, ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಆದರೆ ಅಂತಿಮ ನಿರ್ಧಾರ ಚುನಾವಣಾ ಫಲಿತಾಂಶದ ಮೇಲೆ ಅವಲಂಬಿತವಾಗಿರುತ್ತದೆ,” ಎಂದರು.
ಕೇರಳದಲ್ಲಿ ಯುಡಿಎಫ್ ಗೆಲುವಿನ ಬಗ್ಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದು, ಯಾವುದೇ ಗೊಂದಲ ಇಲ್ಲ ಎಂದು ತಿಳಿಸಿದ್ದಾರೆ. ಅವರು ಕೇರಳದ ಮಾಜಿ ಉಸ್ತುವಾರಿಯಾಗಿದ್ದು, ಬಿಹಾರದ ಕಟಿಹಾರ್ ಕ್ಷೇತ್ರದ ಸಂಸದರಾಗಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕುರಿತು ಮಾತನಾಡಿದ ಅವರು, ಸರ್ಕಾರವನ್ನು ಮುನ್ನಡೆಸಲು ಯಾರು ಸೂಕ್ತ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು. ಪಕ್ಷ ವೀಕ್ಷಕರನ್ನು ನೇಮಿಸಿ, ಅವರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಚರ್ಚೆ ಬಳಿಕ ಹೆಸರು ಅಂತಿಮಗೊಳ್ಳಲಿದೆ. ನಂತರ ಆ ನಿರ್ಧಾರವನ್ನು ಎಐಸಿಸಿಗೆ ಕಳುಹಿಸಲಾಗುತ್ತದೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ವೇಣುಗೋಪಾಲ್ ಸಿಎಂ ಆಗಬಹುದೇ ಎಂಬ ಪ್ರಶ್ನೆಗೆ, ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸಿದರೆ ಅಂತಹ ಸಾಧ್ಯತೆ ಇದೆ ಎಂದು ಹೇಳಿದರು.






