Kerala | ಫೋನ್ ಕಳ್ಳತನ ಶಂಕೆಯಿಂದ ಸಹಕಾರ್ಮಿಕರಿಂದಲೇ ವಲಸೆ ಕಾರ್ಮಿಕನ ಹತ್ಯೆ, 6 ಜನರ ಬಂಧನ

ಸಾಂದರ್ಭಿಕ ಚಿತ್ರ (AI)
ಎರ್ನಾಕುಳಂ, ಎ.1: ಮೊಬೈಲ್ ಫೋನ್ ಕಳ್ಳತನಕ್ಕೆ ಯತ್ನಿಸುತ್ತಿದ್ದನೆಂದು ಶಂಕಿಸಿ, ವಲಸೆ ಕಾರ್ಮಿಕನನ್ನು ಆರು ಸಹಕಾರ್ಮಿಕರ ಗುಂಪು ಕ್ರೂರವಾಗಿ ಥಳಿಸಿ ಕೊಲೆ ಮಾಡಿದ ಘಟನೆ ಕೇರಳದ ಪೆರುಂಬವೂರ್ ಸಮೀಪದ ಮುಡಿಕ್ಕಲ್ನ ಪ್ಲೈವುಡ್ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ನೂರ್ ಹಸನ್ ಹಾಗೂ ಆರೋಪಿಗಳಾದ ಅಲ್ಲಾವುದ್ದೀನ್, ಮಿನಾರುಲ್, ಝಾಕೀರ್ ಹುಸೇನ್, ಹಬೀಸುದ್ದೀನ್, ಹಸನ್ ಅಲಿ ಮತ್ತು ಮುಝಮ್ಮಿಲ್ ಎಲ್ಲರೂ ಅಸ್ಸಾಂ ನಿವಾಸಿಗಳಾಗಿದ್ದಾರೆ. ಬಂಧಿತರಲ್ಲಿ ಮೂವರು ಸಹೋದರರಾಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಹಸನ್ ಕಳ್ಳತನ ಮಾಡಲು ಆರೋಪಿಗಳ ಕೋಣೆಗೆ ನುಗ್ಗಿದ್ದನೆಂಬ ಶಂಕೆಯಿಂದ ಈ ಬರ್ಬರ ಹತ್ಯೆ ನಡೆದಿದೆ.
ಕಾರ್ಮಿಕರು ಕೆಲಸಕ್ಕೆ ತೆರಳುವ ಮುನ್ನ ತಮ್ಮ ಫೋನ್ಗಳನ್ನು ಒಂದೇ ಬಕೆಟ್ ನಲ್ಲಿ ಇಡುವುದು ವಾಡಿಕೆಯಾಗಿದೆ. ತಾವು ಕೆಲಸದಿಂದ ಮರಳಿದಾಗ ಏಳು ಫೋನ್ ಗಳು ಮತ್ತು ಒಂದು ಲಕ್ಷ ರೂ. ಕಳವು ಮಾಡಲು ಬಕೆಟ್ ತೆರೆಯಲು ಯತ್ನಿಸುತ್ತಿದ್ದ ಹಸನ್ ಸಿಕ್ಕಿಬಿದ್ದಿದ್ದನೆಂದು ಆರೋಪಿಗಳು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೋಣೆಯ ಬಾಗಿಲು ಹಾಕಿಕೊಂಡ ಆರೋಪಿಗಳು ಕಟ್ಟಿಗೆಯ ರೋಲರ್ ಗಳಿಂದ ಹಸನ್ ನನ್ನು ಥಳಿಸಿದ್ದು, ತಲೆ ಒಡೆದುಹೋಗಿತ್ತು, ಹಲ್ಲುಗಳು ಉದುರಿಬಿದ್ದಿದ್ದವು ಮತ್ತು ಪಕ್ಕೆಲುಬುಗಳು ಮುರಿದಿದ್ದವು. ಗಲಾಟೆ ಕೇಳಿ ಧಾವಿಸಿ ಬಂದ ಸ್ಥಳೀಯರು ತೀವ್ರವಾಗಿ ಗಾಯಗೊಂಡಿದ್ದ ಹಸನ್ ನನ್ನು ಪೆರುಂಬವೂರ್ ನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಆತ ಬದುಕುಳಿಯಲಿಲ್ಲ.
ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






