ದುಬೈನಲ್ಲಿ ಇರಾನಿ ಆಸ್ಪತ್ರೆಗಳ ಮುಚ್ಚುಗಡೆಯಿಂದ ಉದ್ಯೋಗ ಕಳೆದುಕೊಂಡ ಕೇರಳಂನ ನರ್ಸ್ಗಳು : ನೆರವಾಗುವಂತೆ ಪ್ರಧಾನಿಗೆ ಸತೀಶನ್ ಪತ್ರ

ವಿ.ಡಿ.ಸತೀಶನ್ | Photo Credit : PTI
ಹೊಸದಿಲ್ಲಿ,ಜೂ.6: ಮಧ್ಯಪ್ರಾಚ್ಯ ಉದ್ವಿಗ್ನತೆಯ ನಡುವೆ ಯುಎಇನಲ್ಲಿ ಇರಾನಿ ಆಸ್ಪತ್ರೆಗಳ ಮುಚ್ಚುಗಡೆಯಿಂದಾಗಿ ಯುಎಇನಲ್ಲಿ ಮುಖ್ಯವಾಗಿ ಕೇರಳಂ ಮೂಲದ ನರ್ಸ್ಗಳು ಸಹಿತ ನೂರಾರು ಭಾರತೀಯ ಆರೋಗ್ಯಪಾಲನಾ ವೃತ್ತಿಪರರು ಅನಿಶ್ಚಿತತೆಯನ್ನು ಎದುರಿಸುತ್ತಿದ್ದು, ಅವರಿಗೆ ನೆರವಾಗಲು ತುರ್ತಾಗಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಸತೀಶನ್, ‘ವಿದೇಶದಲ್ಲಿರುವ ಭಾರತೀಯ ಪೌರರನ್ನು ಒಳಗೊಂಡ ಮಾನವೀಯ ಕಳಕಳಿಯ ಪರಿಸ್ಥಿತಿ’ ಇದಾಗಿದೆಯೆಂದು ಬಣ್ಣಿಸಿದ್ದಾರೆ. ಯುಎಇನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಯುಎಇನ ಸಂಬಂಧಪಟ್ಟ ಇಲಾಖೆಗಳ ಜೊತೆ ಈ ವಿಷಯವನ್ನು ಪ್ರಸ್ತಾಪಿಸಬೇಕೆಂದು ಅವರು ಕೇಂದ್ರ ಸರಕಾರನ್ನು ಆಗ್ರಹಿಸಿದ್ದಾರೆ.
ಯುಎಇನ ಆಸ್ಪತ್ರೆಗಳಲ್ಲಿ ಉದ್ಯೋಗದಲ್ಲಿರುವ ಹಲವಾರು ಆರೋಗ್ಯಪಾಲನಾ ವೃತ್ತಿಯವರು ವೀಸಾ ಸಂಬಂಧಿತ ನಿರ್ಬಂಧಗಳನ್ನು ಎದುರಿಸುತ್ತಿರುವುದರಿಂದ ಅವರ ಉದ್ಯೋಗ ವೀಸಾ, ಅವಲಂಭಿತರ ವೀಸಾಗಳು ಹಾಗೂ ಸಂದರ್ಶನ ವೀಸಾಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಹಲವಾರು ಮಲಯಾಳಿ ಕುಟುಂಬಗಳನ್ನು ಆರ್ಥಿಕ ಹಾಗೂ ಭಾವಾನಾತ್ಮಕ ಒತ್ತಡಕ್ಕೆ ದೂಡಿದೆ ಎಂದು ಸತೀಶನ್ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ದುಬೈನಲ್ಲಿರುವ ಹಲವಾರು ಇರಾನಿ ಆಸ್ಪತ್ರೆಗಳು ಗಣನೀಯ ಸಂಖ್ಯೆಯಲ್ಲಿ ಭಾರತೀಯ ಆರೋಗ್ಯಪಾಲನಾ ವೃತ್ತಿಪರರನ್ನು ಅದರಲ್ಲೂ ವಿಶೇಷವಾಗಿ ಮಲಯಾಳಿ ನರ್ಸ್ಗಳನ್ನು ನೇಮಿಸಿಕೊಡಿದ್ದವು.
ಆದರೆ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಬಳಿಕ ಈ ಆಸ್ಪತ್ರೆಗಳು ಹಠಾತ್ತನೇ ಮುಚ್ಚುಗಡೆಗೊಂಡಿದ್ದರಿಂದ ಉದ್ಯೋಗಗಳನ್ನು ಕಳೆದುಕೊಂಡು ಯುಎಇಯನ್ನು ತೊರೆಯಬೇಕಾದಂತಹ ಭೀತಿಯನ್ನು ಅವರು ಎದುರಿಸುತ್ತಿದ್ದಾರೆ.
‘‘ಈ ವೃತ್ತಿಪರರು ಕೋವಿಡ್19 ಸಾಂಕ್ರಾಮಿಕ ಸೇರಿದಂತೆ ಹಲವಾರು ಆರೋಗ್ಯಪಾಲನೆಯ ತುರ್ತು ಸನ್ನಿವೇಶಗಳಲ್ಲಿ ಮುಂಚೂಣಿಯಲ್ಲಿ ನಿಂತು ಅತ್ಯಂತ ಸಮರ್ಪಣಾಭಾವ ಹಾಗೂ ಉತ್ಕೃಷ್ಟತೆಯೊಂದಿಗೆ ಸೇವೆಯನ್ನು ಸಲ್ಲಿಸಿದ್ದಾರೆ ’’ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಕೇರಳ ಮೂಲದ ಹಲವಾರು ನರ್ಸ್ಗಳು ಹಾಗೂ ಆರೋಗ್ಯಪಾಲನಾ ಉದ್ಯೋಗಿಗಳು ಯುಎಇನಲ್ಲಿ ಕೇವಲ ನೌಕರಿ ಮಾತ್ರವಲ್ಲದೆ ತಮ್ಮ ಕಾನೂನಾತ್ಮಕ ವಾಸ್ತವ್ಯದ ಸ್ಥಾನಮಾನವನ್ನು ಕೂಡಾ ಕಳೆದುಕೊಳ್ಳುವ ಭೀತಿಯನ್ನು ವ್ಯಕ್ತಪಡಿಸಿ ಅಹವಾಲು ಸಲ್ಲಿಸಿದ ಬಳಿಕ ಪ್ರಧಾನಿಗೆ ಸತೀಶನ್ ಅವರು ಈ ಪತ್ರವನ್ನು ಬರೆದಿದ್ದಾರೆ.






