ಪಾಲಕ್ಕಾಡ್ ರೈಲ್ವೆ ವಿಭಾಗದಿಂದ ಮಂಗಳೂರು ಬೇರ್ಪಡಿಕೆಗೆ ಕೇರಳಂ ವಿರೋಧ | ‘ಏಕಪಕ್ಷೀಯ ನಿರ್ಧಾರ’: CM ವಿ ಡಿ ಸತೀಶನ್

ಕೇರಳಂ ಮುಖ್ಯಮಂತ್ರಿ ವಿ.ಡಿ.ಸತೀಶನ್ | Photo: newindianexpress.com
ತಿರುವನಂತಪುರ: ಮಂಗಳೂರು ಪ್ರದೇಶವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ, ನೈಋತ್ಯ ರೈಲ್ವೆಯ ಮೈಸೂರು ವಿಭಾಗದೊಂದಿಗೆ ವಿಲೀನಗೊಳಿಸುವ ರೈಲ್ವೆ ಮಂಡಳಿಯ ಇತ್ತೀಚಿನ ನಿರ್ಧಾರಕ್ಕೆ ಕೇರಳಂ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಅ. 1ರಿಂದ ಜಾರಿಗೆ ಬರಲಿರುವ ಈ ಕ್ರಮವು ಪಾಲಕ್ಕಾಡ್ ವಿಭಾಗದ ಕಾರ್ಯಾಚರಣೆ ಹಾಗೂ ಆರ್ಥಿಕ ಮಹತ್ವವನ್ನು ಗಣನೀಯವಾಗಿ ಕುಗ್ಗಿಸಲಿದೆ ಎಂದು ಸರಕಾರ ಹೇಳಿದೆ.
ರೈಲ್ವೆಯ ‘ಏಕಪಕ್ಷೀಯ ನಿರ್ಧಾರ’ ಸ್ವೀಕಾರಾರ್ಹವಲ್ಲ ಎಂದು ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಶನಿವಾರ (ಆಗಸ್ಟ್ 22) ಹೇಳಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರೊಂದಿಗೆ ತುರ್ತಾಗಿ ಚರ್ಚಿಸುವುದಾಗಿ ತಿಳಿಸಿದ್ದಾರೆ.
‘ಇದು ದಕ್ಷಿಣ ರೈಲ್ವೆ ಮತ್ತು ಕೇರಳಂನ ಆದಾಯ ಹಾಗೂ ಅಭಿವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರಲಿದೆ. ಪ್ರಧಾನಿ ಮತ್ತು ಕೇಂದ್ರ ರೈಲ್ವೆ ಸಚಿವರೊಂದಿಗೆ ಈ ವಿಷಯವನ್ನು ತುರ್ತಾಗಿ ಚರ್ಚಿಸುತ್ತೇವೆ’ ಎಂದು ಸತೀಶನ್ ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಂಗಳೂರು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸುವ ನಿರ್ಧಾರವನ್ನು ರಾಜ್ಯ ಸರಕಾರಕ್ಕೆ ಮಾಹಿತಿ ನೀಡದೆ ಅಥವಾ ಅದರೊಂದಿಗೆ ಯಾವುದೇ ಚರ್ಚೆ ನಡೆಸದೆ ಏಕಪಕ್ಷೀಯವಾಗಿ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಮುಖ ಮಂಗಳೂರು ಜಂಕ್ಷನ್ ಅನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸುವುದರಿಂದ ವಿಭಾಗದ ಆದಾಯ ಗಣನೀಯವಾಗಿ ಕುಸಿಯಲಿದೆ. ಇದರ ಪರಿಣಾಮ ವಿಭಾಗದ ಅಭಿವೃದ್ಧಿಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ದಕ್ಷಿಣ ರೈಲ್ವೆಯ ಅಧೀನದಲ್ಲಿರುವ ಉಳ್ಳಾಲ–ಮಂಗಳೂರು ವಿಭಾಗವನ್ನು ನೈಋತ್ಯ ರೈಲ್ವೆಯೊಂದಿಗೆ ವಿಲೀನಗೊಳಿಸುವುದರಿಂದ ದಕ್ಷಿಣ ರೈಲ್ವೆ ಹಾಗೂ ಕೇರಳಂಗೆ ಗಣನೀಯ ನಷ್ಟವಾಗಲಿದೆ ಎಂದು CMO ಹೇಳಿದೆ.
‘ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂಬುದು ಕೇರಳಂದ ಒಗ್ಗಟ್ಟಿನ ಬೇಡಿಕೆಯಾಗಿದೆ. ತಕ್ಷಣದ ಪರಿಹಾರ ಕೋರಿ ಕೇಂದ್ರ ಸರಕಾರವನ್ನು ಸಂಪರ್ಕಿಸುತ್ತೇವೆ. ಪ್ರಧಾನಿ ಹಾಗೂ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆಯುತ್ತೇವೆ. ರಾಜ್ಯದ ಸಂಸದರ ಬೆಂಬಲದೊಂದಿಗೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತೇವೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಕೇರಳಂನ ರೈಲು ಅಭಿವೃದ್ಧಿ ಆಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆ’
ಮಂಗಳೂರು ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸುವ ಕ್ರಮವು ಕೇರಳಂದ ರೈಲು ಅಭಿವೃದ್ಧಿ ಆಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ರೈಲು ಪ್ರಯಾಣಿಕರ ಸಂಘ ‘ಫ್ರೆಂಡ್ಸ್ ಆನ್ ರೈಲ್’ ಹೇಳಿದೆ.
ಪ್ರತ್ಯೇಕ ರೈಲ್ವೆ ವಲಯಕ್ಕಾಗಿ ಕೇರಳಂ ಸರಕಾರ ದೀರ್ಘಕಾಲದಿಂದ ಮಾಡುತ್ತಿರುವ ಬೇಡಿಕೆಯನ್ನು ಪರಿಗಣಿಸದೆ ರೈಲ್ವೆ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ ಎಂದು ಸಂಘ ಹೇಳಿದೆ.
ಪಾಲಕ್ಕಾಡ್ ವಿಭಾಗದ ಭೌಗೋಳಿಕ ವ್ಯಾಪ್ತಿಯನ್ನು ಗಣನೀಯವಾಗಿ ಕಡಿಮೆ ಮಾಡಿದ ಸೇಲಂ ವಿಭಾಗದ ರಚನೆಯ ಬಳಿಕ, ಇದೀಗ ಹೆಚ್ಚಿನ ಪ್ರದೇಶಗಳನ್ನು ಮೈಸೂರು ವಿಭಾಗಕ್ಕೆ ವರ್ಗಾಯಿಸುವ ಕ್ರಮವು ಕೇರಳಂದ ರೈಲು ಕಾರ್ಯಾಚರಣೆ ಹಾಗೂ ಅಭಿವೃದ್ಧಿಯ ನಿರೀಕ್ಷೆಗಳಿಗೆ ಮತ್ತಷ್ಟು ಅಡ್ಡಿಯಾಗಲಿದೆ ಎಂದು ಸಂಘ ತಿಳಿಸಿದೆ.
ಈ ಕ್ರಮವು ಅಂತಿಮವಾಗಿ ಹಲವು ಕಡಿಮೆ ಆದಾಯದ ನಿಲ್ದಾಣಗಳನ್ನು ತೆಗೆದುಹಾಕಲು ಕಾರಣವಾಗಬಹುದು. ಅಲ್ಲದೆ, ಮಂಗಳೂರು ಮತ್ತು ಕೇರಳಂನ ನಡುವಿನ ರೈಲು ಸೇವೆಗಳ ಮೇಲೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ‘ಫ್ರೆಂಡ್ಸ್ ಆನ್ ರೈಲ್’ ಹೇಳಿದೆ.
ಸೌಜನ್ಯ: thehindu.com






