Kerala | ವಿರೋಧ ಪಕ್ಷದ ನಾಯಕನಾಗಿ ಪಿಣರಾಯಿ ವಿಜಯನ್ ಆಯ್ಕೆ: ಸಿಪಿಎಂ ಪಾಲಿಟ್ ಬ್ಯೂರೊದಲ್ಲಿ ಭಿನ್ನಾಭಿಪ್ರಾಯ

ಪಿಣರಾಯಿ ವಿಜಯನ್ (PTI)
ತಿರುವನಂತಪುರಂ: ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಆಯ್ಕೆ ಮಾಡಲು ಕೇರಳ ಸಿಪಿಎಂ ರಾಜ್ಯ ಸಮಿತಿ ಮುಂದಿಟ್ಟಿರುವ ಪ್ರಸ್ತಾವವು ಪಕ್ಷದ ಪಾಲಿಟ್ ಬ್ಯೂರೊದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಯುವ ನಾಯಕರೊಬ್ಬರಿಗೆ ಈ ಜವಾಬ್ದಾರಿ ನೀಡಿದ್ದರೆ ಪಕ್ಷಕ್ಕೆ ದೀರ್ಘಾವಧಿಯಲ್ಲಿ ಅನುಕೂಲವಾಗುತ್ತಿತ್ತು ಎಂದು ಪಾಲಿಟ್ ಬ್ಯೂರೊದ ಕೆಲ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ.
81 ವರ್ಷದ ಪಿಣರಾಯಿ ವಿಜಯನ್ ಅವರ ಹೆಸರನ್ನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೇರಳ ಸಿಪಿಎಂ ರಾಜ್ಯ ಸಮಿತಿ ಕಳೆದ ಗುರುವಾರ ಶಿಫಾರಸು ಮಾಡಿತ್ತು. ಬಳಿಕ ಈ ವಿಷಯದ ಕುರಿತು ಸಿಪಿಎಂ ಪಾಲಿಟ್ ಬ್ಯೂರೊ ಆನ್ಲೈನ್ ಸಭೆ ನಡೆಸಿ ಚರ್ಚಿಸಿತು.
ಕೇರಳ ವಿಧಾನಸಭೆ ಚುನಾವಣಾ ಫಲಿತಾಂಶದ ಪರಾಮರ್ಶೆಗಾಗಿ ಕಳೆದ ವಾರ ರಾಜ್ಯ ಸಮಿತಿ ಸಭೆ ಸೇರಿತ್ತು. ಈ ವೇಳೆ ವಿರೋಧ ಪಕ್ಷದ ನಾಯಕನ ಆಯ್ಕೆ ಕುರಿತೂ ಚರ್ಚೆ ನಡೆದಿದ್ದು, ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಹಾಗೂ ಮಾಜಿ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರ ಹೆಸರೂ ಪ್ರಸ್ತಾಪವಾಗಿತ್ತು.
ಸಭೆಯಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತು ಪಕ್ಷದ ಕಾರ್ಯವೈಖರಿ ಕುರಿತು ಕೆಲ ಟೀಕೆಗಳು ಕೇಳಿಬಂದಿದ್ದರೂ, ಅಂತಿಮವಾಗಿ ರಾಜ್ಯ ಸಮಿತಿಯು ವಿಜಯನ್ ಅವರ ಹೆಸರನ್ನೇ ಮುಂದಿಟ್ಟಿದೆ ಎಂದು ಮೂಲಗಳು ಹೇಳಿವೆ.
ರಾಜ್ಯ ಸಮಿತಿಯ ಪ್ರಸ್ತಾವದ ಕುರಿತು ಚರ್ಚಿಸಲು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಪಾಲಿಟ್ ಬ್ಯೂರೊ ಸಭೆ ಕರೆದಿದ್ದರು. ಸಭೆಯಲ್ಲಿ ಎಂ.ಎ. ಬೇಬಿ, ಮೊಹಮ್ಮದ್ ಸಲೀಮ್, ತಪನ್ ಸೇನ್ ಹಾಗೂ ಕೇರಳ ಸಿಪಿಎಂ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹತ್ತು ಮಂದಿ ವಿಜಯನ್ ಪರವಾಗಿ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಬಿ.ವಿ. ರಾಘವುಲು, ಅಶೋಕ್ ಧವ್ಲೆ ಹಾಗೂ ವಿಜೂ ಕೃಷ್ಣನ್ ಸೇರಿದಂತೆ ಏಳು ಮಂದಿ ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಮೊದಲು ನಡೆದ ಪಾಲಿಟ್ ಬ್ಯೂರೊ ಸಭೆಯಲ್ಲಿಯೂ ಪಿಣರಾಯಿ ವಿಜಯನ್ ಅವರು ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದಿದ್ದರೆ ಉತ್ತಮವಾಗುತ್ತಿತ್ತು ಎಂಬ ಅಭಿಪ್ರಾಯ ಕೆಲ ನಾಯಕರಿಂದ ವ್ಯಕ್ತವಾಗಿತ್ತು. ಅವರು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಿಂದ ದೂರ ಉಳಿದಿದ್ದರೆ ಆಡಳಿತ ವಿರೋಧಿ ಅಲೆಯ ತೀವ್ರತೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದಿತ್ತು ಎಂದು ಅವರು ಹೇಳಿದ್ದರು.






