ಕೇರಳ | ಆರೆಸ್ಸೆಸ್ ಕಾರ್ಯಕರ್ತ ಆತ್ಮಹತ್ಯೆ ಪ್ರಕರಣ : ಲೈಂಗಿಕ ಕಿರುಕುಳ ಆರೋಪದಡಿ ನಿದೀಶ್ ಮುರಳೀಧರನ್ ವಿರುದ್ಧ ಪ್ರಕರಣ ದಾಖಲು

ಆನಂದು ಅಜಿ |Photo: Instagram/ anantwo_aji
ತಿರುವನಂತಪುರಂ: ಕಳೆದ ವಾರ ಆತ್ಮಹತ್ಯೆ ಮಾಡಿಕೊಂಡಿದ್ದ ಆರೆಸ್ಸೆಸ್ ಕಾರ್ಯಕರ್ತ ಆನಂದು ಅಜಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಕಾಂಜಿರಾಪಳ್ಳಿ ನಿವಾಸಿಯಾದ ನಿದೀಶ್ ಮುರಳೀಧರನ್ ಎಂಬಾತನ ವಿರುದ್ಧ ತಂಪನೂರ್ ಠಾಣೆಯ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣವನ್ನು ಕೊಟ್ಟಾಯಂ ಜಿಲ್ಲೆಯ ಪೊಂಕುನ್ನಮ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ನಾವು ಈ ಕುರಿತು ಎಫ್ಐಆರ್ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಂಕುನ್ನಮ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ಟೋಬರ್ 9ರಂದು ಕೊಟ್ಟಾಯಂನ ತಂಪಲಕ್ಕಾಡ್ ನಿವಾಸಿಯಾಗಿರುವ ಸಾಫ್ಟ್ ವೇರ್ ಇಂಜಿನಿಯರ್ ಆದ ಆನಂದು ಅಜಿ ತಂಪನೂರ್ ನ ಲಾಡ್ಜ್ ಒಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರೆಸ್ಸೆಸ್ ಜೊತೆ ದೀರ್ಘಕಾಲದಿಂದ ಸಂಪರ್ಕ ಹೊಂದಿದ್ದ ಕುಟುಂಬಕ್ಕೆ ಸೇರಿದ್ದ ಆನಂದು ಅಜಿ ಕೂಡ ಆರೆಸ್ಸೆಸ್ ಕಾರ್ಯಕರ್ತರಾಗಿದ್ದರು.
ಆತ್ಮಹತ್ಯೆಗೆ ಮೊದಲು ಆನಂದ್ ಬರೆದ ಡೆತ್ ನೋಟ್ ನಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ಆರೋಪಿಸಿದ್ದರು. ಪ್ರಕರಣ ಕೇರಳದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.







