ಕೇರಳ | ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ 'ಗುರು ಪಾದ ಪೂಜೆ' : ತನಿಖೆಗೆ ಆದೇಶ

Photo | thenewsminute
ಕಾಸರಗೋಡು : ಬಂದಡ್ಕದಲ್ಲಿರುವ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು 'ಗುರು ಪಾದ ಪೂಜೆ'ಯನ್ನು ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇದು ಕೇರಳದಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ಭಾರತೀಯ ವಿದ್ಯಾನಿಕೇತನ (ಬಿವಿಎನ್) ಜೊತೆ ಸಂಯೋಜಿತವಾಗಿರುವ ಅನೇಕ ಖಾಸಗಿ ಶಾಲೆಗಳಲ್ಲಿ ಗುರುಪೂರ್ಣಿಮಾ ಆಚರಣೆಯ ಭಾಗವಾಗಿ ಗುರು ಪಾದ ಪೂಜೆಯನ್ನು ಮಾಡಲಾಗಿದೆ.
ಸಾರ್ವಜನಿಕರ ಆಕ್ರೋಶದ ನಂತರ, ಕೇರಳದ ಸಾಮಾನ್ಯ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಈ ಕುರಿತು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದೆ.
ಕಾಸರಗೋಡಿನ ಬಂದಡ್ಕದ ಸರಸ್ವತಿ ವಿದ್ಯಾಲಯ ಮತ್ತು ಮಾವೇಲಿಕ್ಕರದಲ್ಲಿರುವ ವಿವೇಕಾನಂದ ವಿದ್ಯಾಪೀಠದಿಂದ ಸ್ಪಷ್ಟನೆ ಪಡೆಯುವಂತೆ ಸಚಿವರು ಸಾಮಾನ್ಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸೂಚಿಸಿದ್ದಾರೆ. ಮಾವೇಲಿಕ್ಕರದಲ್ಲಿರುವ ವಿವೇಕಾನಂದ ವಿದ್ಯಾಪೀಠದಲ್ಲಿ ಗೌರವದ ಸಂಕೇತವಾಗಿ ನಿವೃತ್ತ ಶಿಕ್ಷಕರ ಪಾದಗಳನ್ನು ವಿದ್ಯಾರ್ಥಿಗಳು ತೊಳೆದಿದ್ದಾರೆ ಎಂದು ವರದಿಯಾಗಿತ್ತು.
ಕಾಸರಗೋಡು ಜಿಲ್ಲೆಯ ತ್ರಿಕರಿಪುರದ ಶ್ರೀ ಚಕ್ರಪಾಣಿ ವಿದ್ಯಾ ಮಂದಿರ, ಕುಂದಂಕುಝಿಯ ಹರಿಶ್ರೀ ವಿದ್ಯಾಲಯ, ಚೀಮೇನಿಯ ವಿವೇಕಾನಂದ ವಿದ್ಯಾ ಮಂದಿರ ಸೇರಿದಂತೆ ಇತರೆ ಖಾಸಗಿ ಶಾಲೆಗಳಲ್ಲಿ ಇದೇ ರೀತಿಯ ಘಟನೆಗಳು ನಡೆದಿವೆ. ಈ ಎಲ್ಲಾ ಶಾಲೆಗಳು ಭಾರತೀಯ ವಿದ್ಯಾನಿಕೇತನ (ಬಿವಿಎನ್) ಜೊತೆ ಸಂಯೋಜಿತವಾಗಿವೆ. ಕೇರಳದಲ್ಲಿ ನೋಂದಾಯಿಸಲ್ಪಟ್ಟ ಸಂಸ್ಥೆಯಾಗಿದೆ. ಇದು ಆರೆಸ್ಸೆಸ್ನ ಶೈಕ್ಷಣಿಕ ವಿಭಾಗವಾದ ವಿದ್ಯಾ ಭಾರತಿಯ ಶೈಕ್ಷಣಿಕ ದೃಷ್ಟಿಕೋನವನ್ನು ಉತ್ತೇಜಿಸುತ್ತದೆ.
ಬಂದಡ್ಕ ಶಾಲೆಯ ವಿದ್ಯಾರ್ಥಿಗಳು ಅತಿಥಿಗಳ ಪಾದಗಳಿಗೆ ಹೂವುಗಳನ್ನು ಅರ್ಪಿಸುವ ಆಚರಣೆಯಾದ 'ಗುರು ಪಾದ ಪೂಜೆ'ಯನ್ನು ಮಾಡುತ್ತಿರುವ ವೀಡಿಯೊ ವೈರಲ್ ಆದ ನಂತರ ಈ ವಿವಾದ ಭುಗಿಲೆದ್ದಿದೆ.
ಈ ಪದ್ಧತಿಯನ್ನು DYFI ಮತ್ತು SFI ಬಲವಾಗಿ ಖಂಡಿಸಿವೆ. ಚೀಮೇನಿ ಶಾಲೆಯಲ್ಲಿ ನೂರಾರು ಶಿಕ್ಷಕರ ಪಾದಗಳನ್ನು ವಿದ್ಯಾರ್ಥಿಗಳು ತೊಳೆದಿದ್ದಾರೆ ಎಂದು DYFI ಆರೋಪಿಸಿದೆ. ಈ ಬ್ರಾಹ್ಮಣ ಆಚರಣೆಗಳನ್ನು RSS ಬೆಂಬಲಿತ ಶಾಲೆಗಳಲ್ಲಿ ನಡೆಸಲಾಗಿದ್ದರೂ, ಇದು ನಮ್ಮ ರಾಜ್ಯಕ್ಕೆ ನಾಚಿಕೆಗೇಡಿನ ವಿಷಯ ಎಂದು DYFI ಹೇಳಿಕೆಯಲ್ಲಿ ತಿಳಿಸಿದೆ.
ಅಲಪ್ಪುಝ ಜಿಲ್ಲೆಯ ಅಟ್ಟುವದಲ್ಲಿರುವ ವಿವೇಕಾನಂದ ವಿದ್ಯಾ ಪೀಠವು ವಿದ್ಯಾರ್ಥಿಗಳನ್ನು ಬಿಜೆಪಿ ನಾಯಕನ ಪಾದಗಳನ್ನು ತೊಳೆಯುವಂತೆ ಮಾಡಿದೆ ಎಂದು SFI ಆರೋಪಿಸಿದೆ. ಈ ಕುರಿತು SFI ರಾಜ್ಯ ಸಮಿತಿ ಶಿಕ್ಷಣ ಸಚಿವ ಶಿವನ್ಕುಟ್ಟಿ ಅವರಿಗೆ ದೂರು ಸಲ್ಲಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಂದಡ್ಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿಟಿ ಉಮಾ, ಈ ಆಚರಣೆಯು ದೀರ್ಘಕಾಲದ 'ವ್ಯಾಸ ಜಯಂತಿ' ಆಚರಣೆಯ ಭಾಗವಾಗಿದೆ. ಅತಿಥಿಗಳ ಪಾದಗಳನ್ನು ಶಿಕ್ಷಕರು ತೊಳೆದಿದ್ದಾರೆ. ವಿದ್ಯಾರ್ಥಿಗಳು ಅವರ ಪಾದಗಳಿಗೆ ಹೂವುಗಳನ್ನು ಮಾತ್ರ ಅರ್ಪಿಸಿದರು. ಈ ಮೂಲಕ ನಮ್ಮ ಮಕ್ಕಳು ಅತಿಥಿಗಳಿಂದ ಆಶೀರ್ವಾದ ಪಡೆದರು. ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ ತಮ್ಮ ಹೆತ್ತವರ ಪಾದಗಳನ್ನು ಮುಟ್ಟುವಂತೆ ಪ್ರೋತ್ಸಾಹಿಸಲಾಗುತ್ತದೆ. ವಿದ್ಯಾರ್ಥಿಗಳ ಜೀವನದಲ್ಲಿ ಅಂತಹ ಅಭ್ಯಾಸಗಳಿಲ್ಲದಿರುವುದರಿಂದ ಮಾದಕ ದ್ರವ್ಯ ಸೇವನೆ ಮತ್ತು ಅನೈತಿಕ ವರ್ತನೆಗೆ ಕಾರಣವಾಗುತ್ತದೆ ಎಂದು ಹೇಳಿದರು.
ಈ ಘಟನೆಯು ಕೇರಳದಲ್ಲಿ ಚಾತುರ್ವರ್ಣ ವ್ಯವಸ್ಥೆಯನ್ನು ಹೇರುವ ಪ್ರಯತ್ನವನ್ನು ಪ್ರತಿಬಿಂಬಿಸುವುದರಿಂದ ಬಲವಾದ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಎಂ. ಶಿವಪ್ರಸಾದ್ ಹೇಳಿದರು.
ಚೀಮೇನಿಯ ವಿವೇಕಾನಂದ ಶಾಲೆಯ ವಿದ್ಯಾಲಯ ಸಮಿತಿಯ ರಾಜೀವನ್ ಮಾತನಾಡಿ, ಇದು ಪ್ರಾಚೀನ ಮತ್ತು ಸನಾತನ ಧರ್ಮದ ಭಾಗವಾಗಿದೆ. ಈ ಆಚರಣೆಗೆ ಅಡ್ಡಿಯಾಗುವ ಯಾವುದೇ ವಿರೋಧವನ್ನು ಒಗ್ಗಟ್ಟಿನಿಂದ ವಿರೋಧಿಸಲಾಗುವುದು ಎಂದು ಹೇಳಿದರು.







