ಪ್ರಚಾರ ಕಾರ್ಯಕ್ರಮದ ವೇಳೆಯೇ ಎಡವಟ್ಟು; ‘ಲವ್ ಜಿಹಾದ್’ ಸಂತ್ರಸ್ತೆಯರೆಂದು ಉತ್ತರ ಭಾರತದ 37 ಮಹಿಳೆಯರನ್ನು ವೇದಿಕೆಗೆ ಕರೆತಂದ ‘ಕೇರಳ ಸ್ಟೋರಿ 2’ ಚಿತ್ರತಂಡ!

Photo credit: mediaoneonline.com
ಹೊಸದಿಲ್ಲಿ: ‘ಕೇರಳ ಸ್ಟೋರಿ 2’ ಚಿತ್ರದ ಪ್ರಚಾರ ಕಾರ್ಯಕ್ರಮವು ವಿವಾದದ ಕೇಂದ್ರಬಿಂದುವಾಯಿತು. ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಲವ್ ಜಿಹಾದ್’ನ ಸಂತ್ರಸ್ತೆಯರೆಂದು ಹೇಳಿಕೊಂಡ 37 ಮಹಿಳೆಯರನ್ನು ಚಿತ್ರತಂಡ ವೇದಿಕೆಗೆ ಕರೆತಂದ ಘಟನೆಗೆ ಸಂಬಂಧಿಸಿ ಹಲವಾರು ಪ್ರಶ್ನೆಗಳು ಎದ್ದಿವೆ. ಚಿತ್ರದ ಕಥಾವಸ್ತು ಕೇರಳವನ್ನು ಆಧರಿಸಿದೆ ಎಂದು ಹೇಳಲಾಗುತ್ತಿದ್ದರೂ, ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹಿಳೆಯರೆಲ್ಲರೂ ಉತ್ತರ ಭಾರತದವರಾಗಿದ್ದು, ಒಬ್ಬರೂ ಕೇರಳದವರಲ್ಲ ಎಂಬುದು ಗಮನ ಸೆಳೆಯಿತು ಎಂದು mediaoneonline.com ವರದಿ ಮಾಡಿದೆ.
ದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ದೇಶಕ ಕಾಮಾಖ್ಯ ನಾರಾಯಣ್ ಸಿಂಗ್ ಹಾಗೂ ನಿರ್ಮಾಪಕ ವಿಪುಲ್ ಅಮೃತ್ಲಾಲ್ ಶಾ ಭಾಗವಹಿಸಿದ್ದರು. ‘ಲವ್ ಜಿಹಾದ್’ ಕೇರಳದಲ್ಲಿ ಪ್ರಾರಂಭವಾಗಿ ದೇಶದ ವಿವಿಧ ಭಾಗಗಳಿಗೆ ವ್ಯಾಪಿಸಿದೆ ಮತ್ತು ಅದನ್ನೇ ಚಿತ್ರದಲ್ಲಿ ಪ್ರತಿಬಿಂಬಿಸಲಾಗಿದೆ ಎಂದು ಅವರು ಹೇಳಿದರು. ವೇದಿಕೆಗೆ ಕರೆತರಲಾದ ಮಹಿಳೆಯರೇ ಅದರ ಸಂತ್ರಸ್ತೆಯರು ಎಂದು ಚಿತ್ರತಂಡ ಹೇಳಿಕೊಂಡಿತು.
ಮಹಿಳೆಯರ ಮೂಲ, ಪ್ರಕರಣಗಳ ವಿವರ ಹಾಗೂ ಕೇರಳದ ಸಂಪರ್ಕ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, ಚಿತ್ರತಂಡ ಆರಂಭದಲ್ಲಿ ಪ್ರತಿಕ್ರಿಯಿಸಲು ನಿರಾಕರಿಸಿತು. ಬಳಿಕ ಸ್ಪಷ್ಟನೆ ನೀಡಿದ ನಿರ್ದೇಶಕ, ಕೇರಳದ ಸಂತ್ರಸ್ತೆಯರ ವಿಡಿಯೊಗಳು ಯೂಟ್ಯೂಬ್ ನಲ್ಲಿ ಲಭ್ಯವಿವೆ ಎಂದು ತಿಳಿಸಿದರು. ನಿರ್ಮಾಪಕರೂ ಇದೇ ಹೇಳಿಕೆಯನ್ನು ಪುನರುಚ್ಚರಿಸಿದರು.
ಇದಕ್ಕೆ ಪ್ರತಿಯಾಗಿ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ನಲ್ಲಿ ‘ಕೇರಳದಲ್ಲಿ ಲವ್ ಜಿಹಾದ್ ಎಂಬುದಕ್ಕೆ ಸಾಕ್ಷ್ಯ ಇಲ್ಲ’ ಎಂಬ ನಿಲುವು ಸಲ್ಲಿಸಿರುವ ವಿಚಾರವನ್ನು ಪತ್ರಕರ್ತರು ಉಲ್ಲೇಖಿಸಿದರು. ಆಗ ಚಿತ್ರತಂಡವು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ತಮ್ಮ ನಿಲುವು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು.
ಈ ಕುರಿತಂತೆ ಹೆಚ್ಚಿನ ಪ್ರಶ್ನೆಗಳು ಮುಂದುವರಿದಾಗ ಮತ್ತು ಸ್ಪಷ್ಟ ಉತ್ತರ ನೀಡಲು ಚಿತ್ರತಂಡಕ್ಕೆ ಕಷ್ಟವಾದ ಹಿನ್ನೆಲೆಯಲ್ಲಿ, ಕಾರ್ಯಕ್ರಮವನ್ನು ಮಧ್ಯದಲ್ಲೇ ತೊರೆದು ವೇದಿಕೆಯಿಂದ ನಿರ್ಗಮಿಸಿತು ಎಂದು mediaoneonline.com ವರದಿ ಮಾಡಿದೆ.







