‘ಕೇರಳ’ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಸಾಂದರ್ಭಿಕ ಚಿತ್ರ - Image Source : PTI
ಹೊಸದಿಲ್ಲಿ, ಫೆ. 24: ಕೇರಳ ರಾಜ್ಯದ ಹೆಸರನ್ನು ‘‘ಕೇರಳಂ’’ ಎಂಬುದಾಗಿ ಬದಲಾಯಿಸುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಅನುಮೋದನೆ ನೀಡಿದೆ.
ಇನ್ನು ರಾಷ್ಟ್ರಪತಿಯವರು, ಭಾರತೀಯ ಸಂವಿಧಾನದ ಮೂರನೇ ವಿಧಿಗೆ ಅನುಗುಣವಾಗಿ, ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಎಂಬ ಹೆಸರಿನ ಮಸೂದೆಯನ್ನು ಅಭಿಪ್ರಾಯಕ್ಕಾಗಿ ಕೇರಳ ವಿಧಾನಸಭೆಗೆ ಕಳುಹಿಸುತ್ತಾರೆ. ವಿಧಾನಸಭೆಯ ಅಭಿಪ್ರಾಯಗಳನ್ನು ಪಡೆದ ಬಳಿಕ, ಭಾರತ ಸರಕಾರವು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತದೆ. ಈ ಮಸೂದೆಯನ್ನು ಸಂಸತ್ನಲ್ಲಿ ಮಂಡಿಸಲು ಅದು ರಾಷ್ಟ್ರಪತಿಯವರಿಂದ ಶಿಫಾರಸನ್ನು ಪಡೆಯುತ್ತದೆ.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುವುದಕ್ಕೆ ಮುಂಚಿತವಾಗಿ ಹೆಸರು ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. 2023 ಮತ್ತು 2024ರಲ್ಲಿ, ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಇರುವ ಎಲ್ಲಾ ಭಾಷೆಗಳಲ್ಲಿ ‘‘ಕೇರಳ’’ ಹೆಸರನ್ನು ‘‘ಕೇರಳಂ’’ ಎಂಬುದಾಗಿ ಬದಲಾಯಿಸುವ ನಿರ್ಣಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ್ದರು. ಕೇಂದ್ರ ಗೃಹ ಸಚಿವಾಲಯವು ಮೊದಲ ನಿರ್ಣಯವನ್ನು ಪರಿಶೀಲಿಸಿದ ಬಳಿಕ, ಕೆಲವು ತಾಂತ್ರಿಕ ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿತ್ತು. ಆ ಬಳಿಕ, ಈ ನಿರ್ಣಯವನ್ನು ಕೇರಳ ವಿಧಾನಸಭೆಯು ಎರಡು ಬಾರಿ ಅಂಗೀಕರಿಸಿದೆ.
ಭಾರತೀಯ ಸಂವಿಧಾನದ ಮೂರನೇ ವಿಧಿಯಡಿಯಲ್ಲಿ, ‘ಕೇರಳ’ ಹೆಸರನ್ನು ‘ಕೇರಳಂ’ ಎಂಬುದಾಗಿ ಬದಲಾಯಿಸಬೇಕು ಎಂಬುದಾಗಿ ಕೇರಳ ಸರಕಾರ ಮಂಡಿಸಿರುವ ನಿರ್ಣಯಗಳು ಕೋರಿವೆ.







