Keralam | 2006ರ KSTP ಕಾಮಗಾರಿ ಪ್ರಕರಣ ಮತ್ತೆ ಮುನ್ನೆಲೆಗೆ; ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆಗೆ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶ

ಜ್ಞಾನೇಶ್ ಕುಮಾರ್ | Photo Credit : PTI
ತಿರುವನಂತಪುರಂ: 2006ರಲ್ಲಿ ಕೇರಳಂನ PWD ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರದ ಆರೋಪಗಳ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. KSTP ರಸ್ತೆ ಕಾಮಗಾರಿಗೆ ಸಂಬಂಧಿಸಿದ ಈ ಪ್ರಕರಣದ ಕುರಿತು ಪ್ರಾಥಮಿಕ ವಿಜಿಲೆನ್ಸ್ ತನಿಖೆಗೆ ಕೇರಳಂ ಗೃಹ ಸಚಿವ ರಮೇಶ್ ಚೆನ್ನಿತ್ತಲ ಆದೇಶಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
KSTP ಅಡಿ MC ರಸ್ತೆ ಉನ್ನತೀಕರಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದ PATI-BEL ಒಕ್ಕೂಟದೊಂದಿಗೆ ಕೆಲಸ ಮಾಡುತ್ತಿದ್ದ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬಿನ್ 2006ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯಾ ಪತ್ರದಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು. PWD ಅಧಿಕಾರಿಗಳಿಂದ ಭ್ರಷ್ಟಾಚಾರ, ದುರಾಡಳಿತ ಮತ್ತು ಕಿರುಕುಳ ನಡೆದಿದೆ ಎಂಬ ಆರೋಪವನ್ನೂ ಪತ್ರದಲ್ಲಿ ಮಾಡಲಾಗಿತ್ತು.
ಲೀ ಸೀ ಬಿನ್ ಅವರ ಆತ್ಮಹತ್ಯೆ ಬಳಿಕ ಪ್ರಕರಣದ ಕುರಿತು ವಿಜಿಲೆನ್ಸ್ ತನಿಖೆ ಆರಂಭವಾಗಿತ್ತು. ಆದರೆ, ಬಳಿಕ ತನಿಖೆ ಸ್ಥಗಿತಗೊಂಡಿತ್ತು. ನಂತರ ಜ್ಞಾನೇಶ್ ಕುಮಾರ್ ಕೇಂದ್ರ ಸೇವೆಯ ನಿಯೋಜನೆಯ ಮೇಲೆ ರಕ್ಷಣಾ ಸಚಿವಾಲಯಕ್ಕೆ ತೆರಳಿದ್ದರು.
ಹಳೆಯ ಕಡತ ಮತ್ತೆ ತೆರೆದ ಗೃಹ ಇಲಾಖೆ
ಜ್ಞಾನೇಶ್ ಕುಮಾರ್ ವಿರುದ್ಧ 2006ರಲ್ಲಿ ನಡೆದಿದ್ದ ಪ್ರಾಥಮಿಕ ವಿಜಿಲೆನ್ಸ್ ತನಿಖೆಗೆ ಸಂಬಂಧಿಸಿದ ಕಡತಗಳನ್ನು ಕೇರಳಂ ಗೃಹ ಇಲಾಖೆ ಇತ್ತೀಚೆಗೆ ತರಿಸಿಕೊಂಡಿತ್ತು. ಕಡತಗಳನ್ನು ತರಿಸಿಕೊಂಡ ಕೆಲವೇ ದಿನಗಳಲ್ಲಿ ಇದೀಗ ಮತ್ತೆ ಪ್ರಾಥಮಿಕ ತನಿಖೆಗೆ ಆದೇಶಿಸಲಾಗಿದೆ.
ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆ ನಡೆಸುವಂತೆ ಕೋರಿ KPCC ನಾಯಕ ವೇಣುಗೋಪಾಲ್ ಶನಿವಾರ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಗೃಹ ಸಚಿವ ರಮೇಶ್ ಚೆನ್ನಿತ್ತಲ ತನಿಖೆಗೆ ಆದೇಶಿಸಿದ್ದಾರೆ ಎಂದು ಪಿಟಿಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಮುಂದಿನ ಕ್ರಮ ಕೈಗೊಳ್ಳುವ ಮೊದಲು ಪ್ರಕರಣದ ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (VACB) ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
SIR ವಿವಾದದ ನಡುವೆಯೇ ತನಿಖೆ
ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಕೇರಳಂ ಕೇಡರ್ನ IAS ಅಧಿಕಾರಿಯಾಗಿರುವ ಜ್ಞಾನೇಶ್ ಕುಮಾರ್ ಅವರು ಕೇಂದ್ರ ಸಚಿವಾಲಯಗಳಿಗೆ ತೆರಳುವ ಮೊದಲು ರಾಜ್ಯದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದರು.






