ಕಿಶ್ತ್ವಾಡ ಮೇಘಸ್ಫೋಟ: 43ಕ್ಕೇರಿದ ಸಾವಿನ ಸಂಖ್ಯೆ, ಹಲವರು ನಾಪತ್ತೆ

PC: x.com/aajtakabhijit
ಜಮ್ಮು/ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ ವಾಡ ಜಿಲ್ಲೆಯಲ್ಲಿ ಗುರುವಾರ ಸಂಭವಿಸಿದ ಮೇಘಸ್ಫೋಟ ಮತ್ತು ದಿಢೀರ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 46ಕ್ಕೇರಿದೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ಶ್ರೀ ಮಚೈಲ್ ಮಾತಾ ಯಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ಯಾರ್ಥಿಕರು ಎಂದು ತಿಳಿದುಬಂದಿದೆ. ದುರಂತದಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮುಸ್ಸಂಜೆಗೆ ಮುನ್ನ ಸೇನೆ, ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ ಮತ್ತು ಇತರ ಏಜೆನ್ಸಿಗಳು ಸಮರೋಪಾದಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ನಡೆಸಿ 160ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದಾರೆ. ಯಾತ್ರಿಗಳಿಗಾಗಿ ಸಿದ್ಧಪಡಿಸಿದ್ದ ಸಮುದಾಯ ಪಾಕಶಾಲೆ ಸುತ್ತಮುತ್ತ ಬಹುತೇಕ ಸಾವು ನೋವು ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. "ನನಗೆ ಕಣ್ಣೀರು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ; ಪರಿಸ್ಥಿತಿ ಶೋಚನೀಯ" ಎಂದು ಕಿಶ್ತ್ವಾಡ ಬಿಜೆಪಿ ಶಾಸಕ ಶಗನ್ ಪರಿಹಾರ್ ಕಂಬನಿ ಮಿಡಿದಿದ್ದಾರೆ.
ವಿಕೋಪ ಪ್ರದೇಶಕ್ಕೆ ತೀರಾ ಸನಿಹದ ಪದ್ದಾರ್ನಲ್ಲಿ ಹೇಳಿಕೆ ನೀಡಿರುವ ವಿರೋಧ ಪಕ್ಷದ ನಾಯಕ ಸುನೀಲ್ ಶರ್ಮಾ, 100ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಕೆಸರಿನಲ್ಲಿ ಮುಳುಗಿದ ಮೃತದೇಹಗಳು ಮತ್ತು ತೀವ್ರವಾಗಿ ಗಾಯಗೊಂಡವು ಅಲ್ಲಲ್ಲಿ ಕಂಡುಬರುತ್ತಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಮಧ್ಯಾಹ್ನ 1 ಗಂಟೆಯ ವೇಳೆಗೆ ಮೇಘಸ್ಫೋಟ ಸಂಭವಿಸಿದ್ದು, ಉಪನದಿಗಳು ತುಂಬಿ ಹರಿದು ಇಡೀ ಕಣಿವೆ ಪ್ರದೇಶವನ್ನು ಮುಳುಗಿಸಿದವು. ಯಾತ್ರಿಗಳಿಗಾಗಿ ನಿರ್ಮಿಸಿದ ತಾತ್ಕಾಲಿಕ ಶಿಬಿರಕ್ಕೆ ವ್ಯಾಪಕ ಹಾನಿಯಾಗಿದ್ದು, ಸಮುದಾಯ ಪಾಕಶಾಲೆ ಸಂಪೂರ್ಣ ಕೆಸರಿನಲ್ಲಿ ಹೂತುಹೋಗಿದೆ.
ಭದ್ರತಾ ಠಾಣೆ ಸೇರಿದಂತೆ ನೆರೆನೀರು ಇತರ ಹಲವು ಕಟ್ಟಡಗಳನ್ನು ನಾಶಪಡಿಸಿದೆ. ಹಲವಾರು ವಾಹನಗಳು ಜಖಂಗೊಂಡಿವೆ. ಸಂತ್ರಸ್ತರಲ್ಲಿ ಇಬ್ಬರು ಸಿಐಎಸ್ಎಫ್ ಯೋಧರು ಸೇರಿದ್ದು, ವಿಕೋಪ ಸಂದರ್ಭದಲ್ಲಿ ಹಲವು ಮಂದಿ ಊಟ ಮಾಡುತ್ತಿದ್ದರು. 43 ದಿನಳ ಮಚೈಲ್ ಮಾತಾ ಯಾತ್ರೆ ಜುಲೈ 25ರಂದು ಆರಂಭವಾಗಿದ್ದು, ಸೆಪ್ಟೆಂಬರ್ 5ರವರೆಗೂ ಮುಂದುವರಿಯಬೇಕಿತ್ತು. ವಿಕೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಯಾತ್ರೆ ರದ್ದುಪಡಿಸಲಾಗಿದೆ. ಕಿಶ್ತ್ವಾರ್ನಿಂದ 90 ಕಿಲೋಮೀಟರ್ ದೂರದ ಚಿಶೋಟಿ, ಮಚೈಲ್ಮಾತಾ ಮಂದಿರದಿಂದ 8.5 ಕಿಲೋಮೀಟರ್ ದೂರದಲ್ಲಿದ್ದು, ಚಾರಣಿಗ ಯಾತ್ರಿಕರಿಗೆ ಮಂದಿರಕ್ಕಿಂತ ಮೊದಲು ಸಿಕ್ಕುವ ಕೊನೆಯ ನಿಲುಗಡೆಯಾಗಿದೆ.







