Kerala | ಖ್ಯಾತ ಇತಿಹಾಸಕಾರ ಕೆ.ಎನ್.ಪಣಿಕ್ಕರ್ ನಿಧನ

Photo Credit: K.V. SRINIVASAN \ thehindu.com
ತಿರುವನಂತಪುರ : ಭಾರತದ ಖ್ಯಾತ ಇತಿಹಾಸಕಾರ, ಶೈಕ್ಷಣಿಕ ಮತ್ತು ಸಾರ್ವಜನಿಕ ವಿದ್ವಾಂಸ ಕೆ.ಎನ್.ಪಣಿಕ್ಕರ್ ಅವರು ಸೋಮವಾರ ತಿರುವನಂತಪುರದಲ್ಲಿ ನಿಧನರಾದರು. ಅವರಿಗೆ 89 ವರ್ಷವಾಗಿತ್ತು.
ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಆಧುನಿಕ ಭಾರತದ ಇತಿಹಾಸ ಅಧ್ಯಯನದಲ್ಲಿ ಅಗ್ರಗಣ್ಯ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಪಣಿಕ್ಕರ್ ಅವರು ಜಾತ್ಯತೀತ ಮತ್ತು ವಿಮರ್ಶಾತ್ಮಕ ಇತಿಹಾಸಶಾಸ್ತ್ರದ ಪ್ರಮುಖ ಪ್ರತಿಪಾದಕರಾಗಿದ್ದರು. ತಮ್ಮ ಶೈಕ್ಷಣಿಕ ಕೃತಿಗಳು ಹಾಗೂ ಸಾರ್ವಜನಿಕ ಬೌದ್ಧಿಕ ಚರ್ಚೆಗಳ ಮೂಲಕ ಅವರು ವಿದ್ಯಾರ್ಥಿಗಳು, ವಿದ್ವಾಂಸರು ಮತ್ತು ಇತಿಹಾಸ, ಸಂಸ್ಕೃತಿ ಹಾಗೂ ರಾಜಕೀಯದ ಕುರಿತು ನಡೆಯುವ ಸಾರ್ವಜನಿಕ ಸಂವಾದಗಳಿಂದ ಅವರು ಹಲವು ಪೀಳಿಗೆಗಳನ್ನು ಪ್ರಭಾವಿತಗೊಳಿಸಿದ್ದರು.
ಪಣಿಕ್ಕರ್ ಅವರು ಪುರಾವೆ ಆಧಾರಿತ ಐತಿಹಾಸಿಕ ಬರವಣಿಗೆ ಮತ್ತು ಭಾರತೀಯ ಇತಿಹಾಸದ ಕೋಮು ವ್ಯಾಖ್ಯಾನಗಳ ವಿರುದ್ಧ ನಡೆಸಿದ ನಿರಂತರ ವಿಮರ್ಶೆಗೆ ಹೆಸರುವಾಸಿಯಾಗಿದ್ದರು. ಹಲವು ದಶಕಗಳ ಪಾಂಡಿತ್ಯಪೂರ್ಣ ಕಾರ್ಯಚಟುವಟಿಕೆಗಳ ಮೂಲಕ, ಇತಿಹಾಸವನ್ನು ಬೌದ್ಧಿಕ ಸಮಗ್ರತೆಯೊಂದಿಗೆ ಬರೆಯಬೇಕು ಮತ್ತು ಸೈದ್ಧಾಂತಿಕ ವಿರೂಪಗಳಿಂದ ಮುಕ್ತವಾಗಿರಬೇಕು ಎಂದು ಅವರು ನಿರಂತರವಾಗಿ ವಾದಿಸಿದ್ದರು.
ಹಲವಾರು ದಶಕಗಳ ಕಾಲ ಪಣಿಕ್ಕರ್ ಅವರು ವಿಶಿಷ್ಟ ಶೈಕ್ಷಣಿಕ ವೃತ್ತಿಜೀವನವನ್ನು ಹೊಂದಿದ್ದರು. ರಾಜಸ್ಥಾನ ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಬೋಧಿಸಿದ ನಂತರ, ಅವರು 1972ರಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು ) ಸೇರಿದರು.ಜೆಎನ್ಯು ನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ, ಐತಿಹಾಸಿಕ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಮತ್ತು ನಂತರ ಸೋಷಿಯಲ್ ಸೈನ್ಸ್ ಸ್ಕೂಲ್ ನ ಡೀನ್ ಆಗಿ ಸೇವೆ ಸಲ್ಲಿಸಿದರು.
ಬೋಧನೆಯ ಹೊರತಾಗಿ ಪಣಿಕ್ಕರ್ ಅವರು ಹಲವು ಪ್ರಮುಖ ಶೈಕ್ಷಣಿಕ ಮತ್ತು ಸಾಂಸ್ಥಿಕ ಹೊಣೆಗಾರಿಕೆಗಳನ್ನು ನಿರ್ವಹಿಸಿದ್ದರು. ಅವರು ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಯಾಗಿ ಹಾಗೂ ನಂತರ ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಅವರು ಕೇರಳ ಐತಿಹಾಸಿಕ ಸಂಶೋಧನಾ ಮಂಡಳಿ (ಕೆಸಿಎಚ್ಆರ್) ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಕೆಸಿಎಚ್ಆರ್ ಪಣಿಕ್ಕರ್ ಅವರ 90ನೇ ಹುಟ್ಟುಹಬ್ಬವನ್ನು (ಏಪ್ರಿಲ್ 26) ವಿಶೇಷ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ನಿಧನ ಹೊಂದಿದ್ದಾರೆ.







