ಕೊಲ್ಕತ್ತಾ : ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ; 7 ಮಂದಿ ಸಜೀವ ದಹನ

PC: x.com/np_nationpress
ಕೊಲ್ಕತ್ತಾ: ಪೂರ್ವ ಕೊಲ್ಕತ್ತಾದ ಗೋದಾಮಿನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟು, ಇತರ 21 ಮಂದಿ ನಾಪತ್ತೆಯಾಗಿದ್ದಾರೆ. ದುರಂತ ಸಂಭವಿಸಿದಾಗ ಗೋದಾಮಿನಲ್ಲಿ ನಿದ್ರಿಸುತ್ತಿದ್ದ ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿಕೊಂಡರು ಎಂದು ತಿಳಿದುಬಂದಿದೆ.
ದಕ್ಷಿಣ ಮತ್ತು ಪೂರ್ವ ಕೊಲ್ಕತ್ತಾ ನಡುವೆ ಸಂಪರ್ಕ ಕಲ್ಪಿಸುವ ಜನನಿಬಿಡ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್ ಬಳಿ ಆನಂದಪುರದ ನಝೀರಾಬಾದ್ ಪ್ರದೇಶದಲ್ಲಿರುವ ಗೋದಾಮಿನಲ್ಲಿ ನಸುಕಿನ 2.30ರ ವೇಳೆಗೆ ಈ ದುರಂತ ಸಂಭವಿಸಿದೆ. ಕಾರ್ಮಿಕರು ಕೆಲಸದ ಬಳಿಕ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗಿದೆ.
ಪೊಲೀಸರು ಆರಂಭದಲ್ಲಿ ಮೂರು ಸಾವುಗಳನ್ನು ದೃಢಪಡಿಸಿದ್ದರು; ಆದರೆ ಆ ಬಳಿಕ ಅಗ್ನಿಶಾಮಕ ಇಲಾಖೆ ಹೇಳಿಕೆ ನೀಡಿ ಏಳು ದೇಹಗಳು ಸುಟ್ಟು ಕರಕಲಾಗಿದ್ದು, ಅವುಗಳನ್ನು ಹೊರತೆಗೆಯಲಾಗಿದೆ ಎಂದು ಪ್ರಕಟಿಸಿದೆ. ಮೃತಪಟ್ಟವರ ಗುರುತು ಪತ್ತೆ ಮಾಡುವುದು ತಕ್ಷಣಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಗೆಯುಗುಳುತ್ತಿರುವ ಅವಶೇಷಗಳಡಿ ಶೋಧ ಕಾರ್ಯ ನಡೆಸಿದಾಗ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಪತ್ತೆಯಾದವರ ಬಗಗೆ ನೀಡಿದ ದೂರಿನ ಪ್ರಕಾರ, 25ಕ್ಕೂ ಹೆಚ್ಚು ಮಂದಿ ರಾತ್ರಿ ವೇಳೆ ಗೋದಾಮಿನೊಳಗಿದ್ದ ಡೆಕೊರೇಟರ್ಸ್ ಯೂನಿಟ್ ನ ಒಳಗಿದ್ದರು ಎನ್ನಲಾಗಿದೆ. ಇತರ ಮೂವರು ಮೊಮೊ ಫ್ಯಾಕ್ಟರಿಯಲ್ಲಿದ್ದರು. ನಾಪತ್ತೆಯಾದವರ ಪೈಕಿ ಬಹುತೇಕ ಮಂದಿ ಪೂರ್ವ ಹಾಗೂ ಪಶ್ಚಿಮ ಮಿಡ್ನಾಪುರ ಜಿಲ್ಲೆಯವರು.
ಡೆಕೊರೇಟರ್ಸ್ ಯೂನಿಟ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಥರ್ಮೋಕೋಲ್ ಮತ್ತು ಇತರ ದಹನಶೀಲ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಲಘುಪಾನೀಯ ಮತ್ತ ಪ್ಯಾಕೆಟ್ ಮಾಡಲಾದ ಆಹಾರವಸ್ತುಗಳೂ ಗೋದಾಮಿನಲ್ಲಿದ್ದುದು ಬೆಂಕಿ ಇಡೀ ಆವರಣಕ್ಕೆ ಕ್ಷಣಮಾತ್ರದಲ್ಲಿ ವ್ಯಾಪಿಸಲು ಕಾರಣವಾಯಿತು ಎಂದು ಹೇಳಲಾಗಿದೆ.







