Kolkata | ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಅತ್ಯಾಚಾರ-ಕೊಲೆ ಪ್ರಕರಣ: ಸಂತ್ರಸ್ತೆಯ ತಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ!

PC: screengrab/x.com/NewsArenaIndia
ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ಪಕ್ಷದ ವತಿಯಿಂದ ಸ್ಪರ್ಧಿಸುವ 19 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ ಬಿಡುಗಡೆ ಮಾಡಿದ್ದು, ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಆರ್.ಜಿ.ಕರ್ ಆಸ್ಪತ್ರೆಯ ಅತ್ಯಾಚಾರ ಘಟನೆ ಸಂತ್ರಸ್ತೆಯ ತಾಯಿಗೆ ಟಿಕೆಟ್ ನೀಡಿದೆ. ಪಾನಿಹಾಥಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯಲಿದ್ದಾರೆ.
ತಾನು ಹಾಗೂ ಪತಿ ಬಿಜೆಪಿ ಸೇರಿದ್ದಾಗಿ ಅಭ್ಯರ್ಥಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.
"ನಾನು ಗೆದ್ದರೆ ಪಾನಿಹಾಥಿ ಜನ ಗೆದ್ದಂತೆ. ಪ್ರತಿಭಟಿಸುವುದನ್ನು ಮರೆತಿರುವ ಜನತೆಯ ಪರವಾಗಿ ನಾನು ಧ್ವನಿ ಎತ್ತುತ್ತೇನೆ" ಎಂದು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಟಿವಿ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಚುನಾವಣೆಯಲ್ಲಿ ಸ್ಪರ್ಧಿಸುವುದು ಹೆಮ್ಮೆಯ ವಿಷಯವಲ್ಲ; ಬದಲಾಗಿ ನೋವು ತುಂಬಿದ ಹೊಣೆಗಾರಿಕೆ. ಪಾನಿಹಾಥಿ ಕ್ಷೇತ್ರದ ಜನತೆಗಾಗಿ ಶ್ರಮಿಸುತ್ತೇನೆ" ಎಂದು ಹೇಳಿದರು. ನಾನು ಜನಸೇವೆ ಮಾಡಿದರೆ ನನ್ನ ಮಗಳಿಗೆ ಸಂತೋಷವಾಗುತ್ತದೆ. ಪಶ್ಚಿಮ ಬಂಗಾಳದ ಎಲ್ಲೆಡೆ ಕಮಲ ಅರಳಬೇಕು ಎನ್ನುವುದು ನನ್ನ ಬಯಕೆ. ತೃಣಮೂಲ ಕಾಂಗ್ರೆಸ್ ಧೂಳೀಪಟವಾಗಬೇಕು ಎಂದು ಹೇಳಿದರು.
ಆಕೆಯ ಅಹವಾಲುಗಳನ್ನು ಕೇಳಿಸಿಕೊಳ್ಳಲು ಬಿಜೆಪಿ ನಾಯಕರಿಗೆ ಸಮಯ ಇಲ್ಲದಿದ್ದರೂ, ಆಕೆಗೆ ಏಕೆ ಟಿಕೆಟ್ ನೀಡಲಾಗಿದೆ ಎಂಬ ಪ್ರಶ್ನೆಗೆ ಆಕೆ ಉತ್ತರ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
"ಅಭಯಾ ತಾಯಿಗೆ ಪ್ರಜಾಸತ್ತಾತ್ಮಕ ಹಕ್ಕು ಇದೆ. ಆದರೆ ತನ್ನ ಮಗಳ ಸಾವಿನ ಪ್ರಕರಣವನ್ನು ಸಿಬಿಐ ಸೂಕ್ತವಾಗಿ ತನಿಖೆ ನಡೆಸಿಲ್ಲ ಎಂದು ಆಪಾದಿಸಿರುವ ಅವರು ಇದೀಗ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದು ಏಕೆ ಎಂದು ಜನತೆಗೆ ಉತ್ತರಿಸಬೇಕು. ಗೃಹಸಚಿವರು, ಪ್ರಧಾನಿ ಅಥವಾ ರಾಷ್ಟ್ರಪತಿಗಳನ್ನು ಭೇಟಿಯಾಗಲು ಸಮಯ ಸಿಗದಿದ್ದರೂ ಇದೀಗ ಬಿಜೆಪಿಯನ್ನು ಏಕೆ ಆಯ್ಕೆ ಮಾಡಿಕೊಂಡರು? ಇದರ ಹಿಂದೆ ಏನಿದೆ ಎಂದು ಹಿರಿಯ ಟಿಎಂಸಿ ಮುಖಂಡ ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.






