ಮಹಾಕುಂಭ ಮೇಳ ಕಾಲ್ತುಳಿತದಲ್ಲಿ ಮೃತರ ಬಗ್ಗೆ ಸರಿಯಾದ ಅಂಕಿ ಅಂಶಗಳನ್ನು ಏಕೆ ನೀಡುತ್ತಿಲ್ಲ : ಸಂಸತ್ತಿನಲ್ಲಿ ಅಖಿಲೇಶ್ ಯಾದವ್ ಪ್ರಶ್ನೆ

Photo | Screengrab/SansadTV
ಹೊಸದಿಲ್ಲಿ : ಮಹಾಕುಂಭ ಮೇಳವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ಆರೋಪಿಸಿದ್ದು, ಡಿಜಿಟಲೀಕರಣದ ಬಗ್ಗೆ ಸಾಕಷ್ಟು ಪ್ರಚಾರ ಮಾಡುತ್ತಿರುವ ಸರಕಾರ, ಕಾಲ್ತುಳಿತದಲ್ಲಿ ಮೃತರ ಬಗ್ಗೆ ಸರಿಯಾದ ಅಂಕಿ ಅಂಶಗಳನ್ನು ಏಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕುಂಭ ಮೇಳದಲ್ಲಿ ಮೊದಲ ಬಾರಿಗೆ ಭಕ್ತರು 300 ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದಾರೆ. ಗಡಿಗಳನ್ನು ಮುಚ್ಚಲಾಗಿದೆ. ಇದು ಟ್ರಾಫಿಕ್ ನ್ನು ನಿರ್ವಹಿಸಲು ಸಾಧ್ಯವಾಗದ ವಿಕಸಿತ ಭಾರತದ ಚಿತ್ರವೇ? ಭೂಮಿಯ ಮೇಲಿನ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಾಧ್ಯವಾಗದೆ ಚಂದ್ರನ ಮೇಲೆ ಹೋಗುವುದರಲ್ಲಿ ಏನು ಪ್ರಯೋಜನವಿದೆ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದ್ದಾರೆ.
ಡಿಜಿಟಲೀಕರಣದ ಬಗ್ಗೆ ಸಂಪೂರ್ಣ ಜಾಹೀರಾತು ನೀಡಲಾಗಿದೆ. ಆ ಡ್ರೋನ್ ಗಳು ಈಗ ಎಲ್ಲಿವೆ ಎಂದು ನಾನು ಕೇಳಲು ಬಯಸುತ್ತೇನೆ, ಮಹಾಕುಂಭ ಮೇಳದಲ್ಲಿ ಮೃತರ ಅಂಕಿ-ಅಂಶಗಳನ್ನು ನೀಡಲು ಅವರಿಗೆ ಸಾಧ್ಯವಾಗಿಲ್ಲ. ಉತ್ತರ ಪ್ರದೇಶದಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಡಬಲ್ ಎಂಜಿನ್ ಸರ್ಕಾರವು ಡಬಲ್ ತಪ್ಪುಗಳನ್ನು ಮಾಡುತ್ತಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.





