ಕರ್ನೂಲ್ ಬಸ್ ದುರಂತ : ಬೈಕ್ ಸವಾರನ ಅಜಾಗರೂಕ ಚಾಲನೆಯ ವೀಡಿಯೊ ವೈರಲ್!

Screengrab : NDTV
ಕರ್ನೂಲ್: ಕರ್ನೂಲ್ನಲ್ಲಿ ಭೀಕರ ಬಸ್ ದುರಂತದಲ್ಲಿ ಒಟ್ಟು 20 ಮಂದಿ ಮೃತಪಟ್ಟಿದ್ದಾರೆ. ಬಸ್ ಅವಘಡ ಸಂಭವಿಸುವುದಕ್ಕೂ ಮುನ್ನ ಶಿವಶಂಕರ್ ಎಂಬ ಬೈಕ್ ಸವಾರನದ್ದು ಎನ್ನಲಾದ ಅಜಾಗರೂಕವಾಗಿ ಚಾಲನೆಯ ವೀಡಿಯೊ ವೈರಲ್ ಆಗಿದೆ.
ಅಕ್ಟೋಬರ್ 24ರಂದು ಮುಂಜಾನೆ 2.23ರ ವೇಳೆಗೆ ಬೈಕ್ ಸವಾರ ಶಿವಶಂಕರ್ ಪೆಟ್ರೋಲ್ ಬಂಕ್ ಒಂದರ ಬಳಿ ತನ್ನ ಬೈಕ್ ಅನ್ನು ನಿಲ್ಲಿಸಿದ್ದಾನೆ. ಬಳಿಕ ಹಿಂಬದಿ ಸವಾರ ಬೈಕ್ ನಿಂದ ಇಳಿದು ಅಕ್ಕಪಕ್ಕ ನೋಡುತ್ತಾ, ಇಬ್ಬರು ಪೆಟ್ರೋಲ್ ಬಂಕ್ ಸಿಬ್ಬಂದಿಗಳನ್ನು ಕೂಗಿ ಕರೆದಿದ್ದಾರೆ. ಕೆಲ ಕ್ಷಣದ ನಂತರ, ಬೈಕ್ ಅನ್ನು ತಿರುಗಿಸಿಕೊಂಡಿರುವ ಬೈಕ್ ಸವಾರ, ನಿಯಂತ್ರಣವಿಲ್ಲದೆ ಬೈಕ್ ಚಲಾಯಿಸಿಕೊಂಡು ಮುಂದೆ ಹೋಗಿದ್ದಾನೆ. ಆ ಬೈಕ್ ಸವಾರ ಮದ್ಯಪಾನ ಸೇವಿಸಿರುವಂತೆ ಕಂಡು ಬಂದಿದೆ ಎಂದು indiatoday ವರದಿಯು ಉಲ್ಲೇಖಿಸಿದೆ.
ಹೈದರಾಬಾದ್ ನಿಂದ ಬೆಂಗಳೂರಿನತ್ತ ತೆರಳುತ್ತಿದ್ದ ವಿ. ಕಾವೇರಿ ಟ್ರಾವೆಲ್ಸ್ ಬಸ್ ಅಗ್ನಿಗಾಹುತಿಗೆ ಮೊದಲು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವ ಬೈಕ್ ಸವಾರನನ್ನು ಶಿವಶಂಕರ್ ಎಂದು ಪೊಲೀಸರು ಗುರುತಿಸಿದ್ದಾರೆ.
ಈ ಅಪಘಾತದಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 44 ಮಂದಿಯ ಪೈಕಿ 19 ಪ್ರಯಾಣಿಕರು ಹಾಗೂ ಬೈಕ್ ಸವಾರ ಶಿವಶಂಕರ್ ಸೇರಿದಂತೆ ಒಟ್ಟು 20 ಮಂದಿ ಮೃತಪಟ್ಟಿದ್ದು ಹಲವು ಪ್ರಯಾಣಿಕರು ಬಸ್ ನ ಗಾಜನ್ನು ಒಡೆದು ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಪೊಲೀಸರು ಬಸ್ ಚಾಲಕ ಲಕ್ಷ್ಮಯ್ಯ, ಸಹಚಾಲಕ ಹಾಗೂ ಬೈಕ್ ನ ಹಿಂಬದಿ ಸವಾರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.







